Home Latest ನ್ಯಾಯದ ಪರ ಧ್ವನಿ ಎತ್ತಿದ ಮಹಿಳೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಸರೆ…!!

ನ್ಯಾಯದ ಪರ ಧ್ವನಿ ಎತ್ತಿದ ಮಹಿಳೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಸರೆ…!!

ಉಡುಪಿ: ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ನಡೆದ ಅನ್ಯಾಯ ಮತ್ತು ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ ಮಹಿಳೆಗೆ ಜೀವ ಬೆದರಿಕೆ ಕರೆಗಳು ಬಂದಿರುವ ಆರೋಪ ಕೇಳಿಬಂದಿದೆ.

ಉಡುಪಿಯ ಅಕ್ಷಿತಾ ಪೂಜಾರಿ ಅವರು ಸಮಾಜಮುಖಿ ಕಳಕಳಿಯಿಂದ ಅನ್ಯಾಯವನ್ನು ಪ್ರಶ್ನಿಸಿದ ಬಳಿಕ ಬೆದರಿಕೆ ಕರೆಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ. ಬೆದರಿಕೆಗೆ ಹೆದರದೆ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಮೊರೆ ಹೋಗಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಧ್ಯಕ್ಷ ಅ. ರಾ. ಪ್ರಭಾಕರ್ ಪೂಜಾರಿ ಅವರ ನೇತೃತ್ವದಲ್ಲಿ ಸಂಘಟನೆ ತಕ್ಷಣ ಸ್ಪಂದಿಸಿದ್ದು, ಕಾರ್ಕಳ, ಕಾಪು ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಕರವೇ ಕಾರ್ಯಕರ್ತರು ಮತ್ತು ತಾಲೂಕು ಅಧ್ಯಕ್ಷರು ಅಕ್ಷಿತಾ ಪೂಜಾರಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸಂಬಂಧಪಟ್ಟ ಪೊಲೀಸ್ ಠಾಣೆಗೆ ಭೇಟಿ ನೀಡಿದ ಕರವೇ ಮುಖಂಡರು, ಬೆದರಿಕೆ ನೀಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಸಂಕಷ್ಟದಲ್ಲಿದ್ದ ಅಕ್ಷಿತಾ ಪೂಜಾರಿ ಅವರಿಗೆ ಧೈರ್ಯ ತುಂಬಿ, “ನಿಮ್ಮ ಜೊತೆ ಇಡೀ ಕನ್ನಡ ರಕ್ಷಣಾ ವೇದಿಕೆ ತಂಡ ಇದೆ” ಎಂಬ ಅಭಯ ನೀಡಿದ್ದಾರೆ.

ಇನ್ನು, ಬೆದರಿಕೆ ಸಂಬಂಧ ದೂರು ನೀಡಲು ಅಕ್ಷಿತಾ ಪೂಜಾರಿ ಅವರು ಎರಡು ಬಾರಿ ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ್ದರೂ, ಪೊಲೀಸರು ತಕ್ಷಣ ಸ್ಪಂದಿಸದೆ ಸಂಜೆ ಆರೂವರೆ ಗಂಟೆ ತನಕ ಠಾಣೆಯಲ್ಲಿ ಕಾಯಿಸಿದ್ದಾರೆ ಎಂದು ಕರವೇ ಆರೋಪಿಸಿದೆ.

ಈ ಕುರಿತು ಕರವೇ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ್ ಪೂಜಾರಿ ಅವರು ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಪ್ರಕರಣ ದಾಖಲಿಸುವ ಭರವಸೆ ದೊರೆತಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ಮಹಿಳೆಗೆ ಬೆದರಿಕೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ನ್ಯಾಯಕ್ಕಾಗಿ ಧ್ವನಿ ಎತ್ತಿದ ಮಹಿಳೆಯ ಬೆಂಬಲಕ್ಕೆ ಕನ್ನಡ ರಕ್ಷಣಾ ವೇದಿಕೆ ನಿಂತಿದ್ದು, ಬೆದರಿಕೆಗೆ ಮಣಿಯದೆ ಕಾನೂನು ಹೋರಾಟ ಮುಂದುವರಿಸುವುದಾಗಿ ಸಂಘಟನೆ ಸ್ಪಷ್ಟಪಡಿಸಿದೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಆರಾ ಪ್ರಭಾಕರ್ ಪೂಜಾರಿ ಸಾಮಾಜಿಕ ಜಾಲತಾಣ ಸಂಚಾಲಕರಾದ ಪುರುಷೋತ್ತಮ್ ಪೂಜಾರಿ ಜಿಲ್ಲಾ ಮುಖಂಡರಾದ ಕುಶಾಲ್ ಅಮೀನ್, ಕುಂದಾಪುರ ತಾಲೂಕು ಅಧ್ಯಕ್ಷ ಶಿವ ಆರ್. ಪೂಜಾರಿ ಕಾಪು ತಾಲೂಕು ಅಧ್ಯಕ್ಷ ಸಿರಾಜುದ್ದೀನ್, ಕಾರ್ಮಿಕ ಘಟಕದ ಉಪಾಧ್ಯಕ್ಷ ಗೋಪಾಲ ದೊರೆ, ಅಯ್ಯಪ್ಪ, ಕುಂದಾಪುರ ಸಾಮಾಜಿಕ ಜಾಲತಾಣ ಸಂಚಾಲಕ ಸಚಿನ್ ಖಾರ್ವಿ, ಗುರುಪ್ರಸಾದ್ ಖಾರ್ವಿ, ಮಹಿಳಾ ಜಿಲ್ಲಾಧ್ಯಕ್ಷೆ ಅಶ್ವಿನಿ ನಾಯ್ಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುಷಾ, ಜಿಲ್ಲಾ ಪ್ರಧಾನ ಸಂಚಾಲಕರಾದ ಜಯಶ್ರೀ ಜಿಲ್ಲಾ ಸಲಹೆಗಾರದ ಸುನಂದಾ ಟಿ ಕೋಟ್ಯಾನ್, ಅಕ್ಷಿತಾ ಪೂಜಾರಿ, ಧನುಷ, ಪವಿತ್ರ ಶೆಟ್ಟಿ, ವಿಜಯಲಕ್ಷ್ಮಿ ಅನುಸೂಯ ನಾಯಕ್ ಉಷಾ, ಜಿಲ್ಲಾ ಹಾಗೂ ತಾಲೂಕು ಸದಸ್ಯರು ಉಪಸ್ಥಿತರಿದ್ದರು.