ಹೆಬ್ರಿ: ಧನಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸದಸ್ಯರಿಂದ ಮರುಪಾವತಿಯಾದ ಸಾಲದ ಹಣವನ್ನು ಒಕ್ಕೂಟದ ಖಾತೆಗೆ ಜಮಾ ಮಾಡದೆ, ನಕಲಿ ದಾಖಲೆ ಸೃಷ್ಟಿಸಿ ಸುಮಾರು ₹28.19 ಲಕ್ಷ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿದೆ.
ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರಾಗಿ ಸುಮಾರು 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಂದಿನಿ ಎಂಬವರ ವಿರುದ್ಧ ಈ ಆರೋಪ ಮಾಡಲಾಗಿದೆ.
2020ರಿಂದ 2026ರವರೆಗೆ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಸಾಲದ ಹಣವನ್ನು ಒಕ್ಕೂಟಕ್ಕೆ ಮರುಪಾವತಿಸಿದ್ದರೂ, ಆ ಮೊತ್ತವನ್ನು ಖಾತೆಗೆ ಜಮಾ ಮಾಡದೆ ಎರಡು ಖಾತೆ ಪುಸ್ತಕಗಳು ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ನಕಲಿ ಸಹಿಗಳನ್ನು ಬಳಸಿ ಒಟ್ಟು ₹28,19,489 ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಮೂಲಕ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವುದಾಗಿ ನೀಡಿದ ದೂರಿನ ಆಧಾರದ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




