ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆ ಎಂಬಲ್ಲಿನ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ, ಮೇಸ್ತ್ರಿ ವೃತ್ತಿಯ ರಾಮಣ್ಣ ಮೂಲ್ಯ (45) ಗಾಯಗೊಂಡ ಸವಾರ ಎಂದು ತಿಳಿಯಲಾಗಿದೆ.
ಕುಡ್ತಮುಗೇರು ಕಡೆಯಿಂದ ಕುಳಾಲು ಕಡೆಗೆ KA 19 EK 6218 ಸಂಖ್ಯೆಯ ಆಕ್ಟಿವಾದಲ್ಲಿ ರಾಮಣ್ಣ ಮೂಲ್ಯ ಅವರು ತೆರಳುತ್ತಿದ್ದರು. ಈ ವೇಳೆ ಬೊಲ್ಪಾದೆಯ ತೀರಾ ಅಪಾಯಕಾರಿ ತಿರುವಿನ ಏರು ರಸ್ತೆಯಲ್ಲಿ ಎದುರಿನಿಂದ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ KA 19 MJ 7242 ಸಂಖ್ಯೆಯ ಮಾರುತಿ ಕಾರು ಆಕ್ಟಿವಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸಂಪೂರ್ಣವಾಗಿ ಜಖಂಗೊಂಡಿದ್ದು, ಸವಾರ ರಾಮಣ್ಣ ಮೂಲ್ಯ ಅವರ ಬಲಗೈ ಮೂಳೆ ಮುರಿದಿದೆ. ಅಪಘಾತದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಬಳಿಕ ಚರಂಡಿಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ವಿಟ್ಲದ ಬೆನಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಕಾರು ಚಲಾಯಿಸುತ್ತಿದ್ದವನು ಕರೋಪಾಡಿ ಗ್ರಾಮದ ಯುವಕನಾಗಿದ್ದು, ಈತನ ಬಳಿ ಚಾಲನಾ ಪರವಾನಿಗೆ ಇರಲಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಈತ ಬಂಟ್ವಾಳ ಸಾರಿಗೆ ಕಚೇರಿಗೆ ಟೆಸ್ಟ್ ಡ್ರೈವ್ ನೀಡಲು ತರಾತುರಿಯಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.



