Home Crime ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ : ಆಟೋ ಚಾಲಕ ಅರೆಸ್ಟ್…!!

ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ : ಆಟೋ ಚಾಲಕ ಅರೆಸ್ಟ್…!!

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದ ಸೂರ್ತಿಲದಲ್ಲಿ ವಿವಾಹಿತ ಮಹಿಳೆಯೋರ್ವರನ್ನು ಬೆದರಿಸಿ ನಿರಂತರ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕ ಗೋಪಾಲಕೃಷ್ಣ ಜಯನಗರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆ ಮತ್ತು ಸ್ಥಳ ಮಹಜರು ನಡೆಸಿದ ಬಳಿಕ ಸುಳ್ಯ ಪೊಲೀಸರು ಆರೋಪಿ ಗೋಪಾಲ ಕೃಷ್ಣ ನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು ಸುಳ್ಯ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಹಾವೇರಿ ಜಿಲ್ಲೆಯ ಮಹಿಳೆಯೋರ್ವರು ಸುಳ್ಯದ ಸೂರ್ತಿಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತ ಬಾಣಂತಿಯರನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.

ಕೆಲಸಕ್ಕೆ ಹೋಗುವ ಸಂದರ್ಭ ಆಟೋ ಚಾಲಕ ಗೋಪಾಲ ಕೃಷ್ಣನ ಪರಿಚಯವಾಗಿದೆ. 2025ನೇ ಜೂನ್ ತಿಂಗಳಲ್ಲಿ ಆತ ಮನೆಗೆ ಬರುವಂತೆ ಒತ್ತಾಯಿಸಿ ಬಳಿಕ ಅನುಚಿತವಾಗಿ ವರ್ತಿಸಿ, ಮದ್ಯ ಕುಡಿಸಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

ಆ ಘಟನೆಯನ್ನು ಆತ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡು ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣ ದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿ ನಂತರ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. 2026ರ ಆ.2ರಂದು ಗೋಪಾಲ ಕೃಷ್ಣ ಸೂರ್ತಿಲದಲ್ಲಿ ನನ್ನ ಬಾಡಿಗೆ ಮನೆಯ ಬಳಿ ಬಂದು ಮತ್ತೆ ಮನೆಗೆ ಬರುವಂತೆ ಒತ್ತಾಯಿಸಿದ್ದು ಬಾರದೆ ಹೋದರೆ ವಿಡಿಯೋವನ್ನು ವಾಟ್ಸಪ್ ಮೂಲಕ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಸಿ ಹಾಕಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.