ಉಡುಪಿ: ಜನತೆಯ ನ್ಯಾಯೋಚಿತ ವಿವಿಧ ಸಮಸ್ಯೆಯ ಬಗ್ಗೆ ಶೀಘ್ರ, ಸಕಾಲದಲ್ಲಿ ಸ್ಪಂದಿಸಿ ಜನರ ವಿಶ್ವಾಸ, ಪ್ರೋತ್ಸಾಹ ಗಳಿಸಲು ಜಯ ಕರ್ನಾಟಕದ ಮಹಿಳಾ, ವಿದ್ಯಾರ್ಥಿ ಘಟಕ ಕಾರ್ಯ ನಿರ್ವಹಿಸ ಬೇಕಾದ ಅಗತ್ಯವಿದೆ. ರಾಜ್ಯ ಜಯ ಕರ್ನಾಟಕ ಸ್ಥಾಪಕಾಧ್ಯಕ್ಷ ದಿ. ಮುತ್ತಪ್ಪ ರೈ ಇದೇ ಉದ್ದೇಶದಿಂದ ಸಂಘಟನೆ ಪ್ರಾರಂಭಿಸಿದ್ದರು.
ಈಗಿನ ರಾಜ್ಯಾಧ್ಯಕ್ಷ ಬಿ. ಎನ್. ಜಗದೀಶ್ ಅದನ್ನು ಕಾರ್ಯಗತಗೊಳಿಸಲು ಕಾರ್ಯ ಪ್ರವರ್ತವಾಗಿರುವುದರಿಂದ ಉಡುಪಿ ಜಿಲ್ಲಾ ಜಯ ಕರ್ನಾಟಕದ ವತಿಯಿಂದ ಅಸ್ತಿತ್ವಕ್ಕೆ ಬಂದ ಮಹಿಳಾ ಘಟಕದ ಅಧ್ಯಕ್ಷೆ ಸ್ಮಿತಾ ಸುಧೀರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ಯಾಮಿಲ್ ಮಲ್ಪೆಗೆ ಪದ ಪ್ರದಾನ ಸಮಾರಂಭ ಸೆಪ್ಟೆಂಬರ್ 13ರಂದು ಉಡುಪಿ ಕಿದಿಯೂರು ಹೊಟೇಲಿನಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಯ ಕರ್ನಾಟಕದ ಉಡುಪಿ ಜಿಲ್ಲಾಧ್ಯಕ್ಷ ಲೂವಿಸ್ ಎಮ್. ಪದ ಪ್ರದಾನ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಯ ಕರ್ನಾಟಕದ ಎಲ್ಲರ ಸಹಕಾರದಿಂದ ತಮ್ಮ ಇತಿ ಮಿತಿಯನ್ನರಿತು ಕಾರ್ಯ ನಿರ್ವಹಿಸುವುದಾಗಿ ಘಟಕಗಳ ನೂತನ ಅಧ್ಯಕ್ಷರು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪದಕ ವಿಜೇತೆ, ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಕರಾಟೆ ತರಬೇತಿದಾರೆ ಪರ್ಕಳದ ಪ್ರವೀಣ್ ಸುವರ್ಣ ಮೊದಲನೆಯ ಬಾರಿಗೆ ಉಡುಪಿ ಜಿಲ್ಲೆಯ ಪರ್ಕಳದಲ್ಲಿ 2026ರ ಡಿಸೆಂಬರ್ ತಿಂಗಳ 12 ಮತ್ತು 13ರಂದು ದೇಶದ ಬೇರೆ ಬೇರೆ ರಾಜ್ಯಗಳ ನೂರಾರು ಕರಾಟೆ ಪಟುಗಳು, ಕ್ರೀಡಾ ತರಬೇತಿ ದಾರರು, ಅಭಿಮಾನಿಗಳು ಭಾಗವಹಿಸುವ ವಿವರದ ಆಮಂತ್ರಣವನ್ನು ಜಿಲ್ಲಾ ಜಯ ಕರ್ನಾಟಕದ ಅಧ್ಯಕ್ಷರಿಗೆ ನೀಡಿ, ಜಯ ಕರ್ನಾಟಕ ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲಾ ಜಯ ಕರ್ನಾಟಕದ ವಿವಿಧ ಘಟಕಗಳ ಜವಾಬ್ದಾರಿ, ಕಾರ್ಯವ್ಯಾಪ್ತಿ, ಕಾರ್ಯ ನಿರ್ವಾಹಣೆಯ ಕುರಿತು ಗೌರವ ಸಲಹೆಗಾರ ಸುಧಾಕರ್ ರಾವ್ ಬಾರ್ಕೂರು, ಪ್ರಧಾನ ಸಂಚಾಲಕ ರತ್ನಾಕರ ಮೊಗವೀರ, ಉಪಾಧ್ಯಕ್ಷ ಪ್ರತಾಪ ಶೆಟ್ಟಿ ಸಾಸ್ತಾನ, ಗೌರವ ಸಲಹೆಗಾರ ಶಶಿಕಾಂತ ಶೆಟ್ಟಿ, ಗೌರವ ಅಧ್ಯಕ್ಷ ಪ್ರಕಾಶ್ ಸಜ್ಜನ್, ಸಂಘಟನಾ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ಮಾದ್ಯಮ ವಕ್ತಾರ ಶ್ರೀನಿವಾಸ ಶೆಟ್ಟಿ ತೋನ್ಸೆ, ಹೋರಾಟ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ, ಉಪಾಧ್ಯಕ್ಷ ಮಹೇಶ್ ಕೋಟಿಯಾನ್ ಮತ್ತು ಜಯ ಕರ್ನಾಟಕದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್ ಸ್ವಾಗತಿಸಿ ವಂದಿಸಿದರು.




