ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಮಚ್ಚಟ್ಟು ಗ್ರಾಮದಲ್ಲಿ ಮನೆ ಕಳವು ಮತ್ತು ಕುಳ್ಳುಂಜೆ ಗ್ರಾಮದಲ್ಲಿ ದೇವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿ, ಕಳವಾದ ಹಣ ವಶಪಡಿಸಿಕೊಂಡಿದ್ದಾರೆ.
ದಿನಾಂಕ 04-09-2026 ರಂದು ಮಧ್ಯಾಹ್ನ 14:30 ರಿಂದ 15:10 ರ ನಡುವೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು, ನೆಲ್ಲಿಗದ್ದೆ ಎಂಬಲ್ಲಿ ಮನೆಯವರು ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಎದುರಿನ ಬಾಗಿಲ ಬೀಗ ಮುರಿದು, ಒಳ ಕೋಣೆಯ ಬಟ್ಟೆಗಳನ್ನು ಚಲ್ಲಾಪಿಲ್ಲಿ ಮಾಡಿ, ಗೋದ್ರೇಜ್ ನಲ್ಲಿ ಪೇಪರ್ ನಲ್ಲಿ ಸುತ್ತಿ ಇರಿಸಿದ್ದ ರೂ. 97,000 ನಗದು ಕಳವು ಮಾಡಲಾಗಿತ್ತು.ಈ ಬಗ್ಗೆ ಅಮಾಸೆಬೈಲು ಠಾಣೆ ಅಪರಾಧ ಕ್ರಮಾಂಕ 23/2026 ಕಲಂ 331(3), 305 BNS 2023 ರಂತೆ ಪ್ರಕರಣ ದಾಖಲಾಗಿತ್ತು.
ಕುಳ್ಳುಂಜೆ ಗ್ರಾಮದ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ರೂ. 35,000 ದಿಂದ 40,000 ಹಣ ಕಳವು ಮಾಡಿದ ಬಗ್ಗೆ ಶಂಕರನಾರಾಯಣ ಠಾಣೆ ಅ.ಕ್ರ 59/2026 ಕಲಂ 331(3), 305 BNS ರಂತೆ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ, ಅಮಾಸೆಬೈಲು ಠಾಣೆ PSI ಭೀಮಾಶಂಕರ್ ಸಿನ್ನೂರ್, ಶಂಕರನಾರಾಯಣ ಠಾಣೆ PSI ಯೂನಸ್ ಗಡ್ಕೆಕರ್, ಅಮಾಸೆಬೈಲು ಠಾಣೆ PSI (ತನಿಖೆ) ಸುಧಾರಾಣಿ ಟಿ. ಹಾಗೂ ಸಿಬ್ಬಂದಿಗಳಾದ ಚಂದ್ರಶೇಖರ ಶೆಟ್ಟಿ ASI, ರಾಘವೇಂದ್ರ, ನವೀನ್ ಕುಮಾರ್, ಸುಧಾಕರ, ದಿನೇಶ, ಸಚಿನ್ ಕುಲಾಲ್, ಮಂಜುನಾಥ, ಜಯರಾಮ ನಾಯ್ಕ, ಚೇತನ್ ಕುಮಾರ್ ಅವರ ತಂಡ ಶೀಘ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಂಧಿತ ಆರೋಪಿಗಳು ರಾಕೇಶ್ ಹೆಚ್ (28) ತಂದೆ ಹನುಮಂತಪ್ಪ, ವಾಸ: ಎತ್ತಿನಹಳ್ಳಿ ಪುಣೆದಹಳ್ಳಿ ಗ್ರಾಮ, ಸಂಡಾ ಅಂಚೆ, ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ.
ನಂದೀಶ್ ಎಂ (24) ತಂದೆ ಮಲ್ಲೇಶಪ್ಪ, ವಾಸ: ಕಾಲೇಕೆರೆ, ಜಕ್ಕೆನಹಳ್ಳಿ ಗ್ರಾಮ, ಸಂಡಾ ಅಂಚೆ, ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಹುಲಿಕಲ್ ಘಾಟ್ ಸಮೀಪ ದಸ್ತಗಿರಿ ಮಾಡಿ, ಕಳವು ಮಾಡಿದ್ದ ರೂ. 1,19,720 ನಗದು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





