Home Crime ಉಡುಪಿ: ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ ಅಡ್ಡ ಹಾಕಿ ಕಂಡಕ್ಟರ್‌ಗಳ ನಡುವೆ ಹೊಡೆದಾಟ : ಇಬ್ಬರ...

ಉಡುಪಿ: ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ ಅಡ್ಡ ಹಾಕಿ ಕಂಡಕ್ಟರ್‌ಗಳ ನಡುವೆ ಹೊಡೆದಾಟ : ಇಬ್ಬರ ವಿರುದ್ಧ ಪ್ರಕರಣ ದಾಖಲು…!!

ಉಡುಪಿ: ನಗರದಲ್ಲಿ ಬಸ್ ಟೈಮಿಂಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಿಸ್ ಬಸ್ ನಿಲ್ದಾಣದ ಒಳಗೆ ಬಸ್‌ಗಳನ್ನು ಅಡ್ಡ ಹಾಕಿ, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಜಗಳವಾಡಿದ ಇಬ್ಬರು ಬಸ್ ಕಂಡಕ್ಟರ್‌ಗಳ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಡ್ ಕಾನ್‌ಸ್ಟೇಬಲ್ ಅಬ್ದುಲ್ ಬಶೀರ್ ಅವರಿಗೆ ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ, ಬಸ್ ನಿಲ್ದಾಣದ ಒಳಗೆ ಜನರು ಸಂಚರಿಸುವ ಸ್ಥಳದಲ್ಲಿಯೇ ಎರಡು ಬಸ್ಸುಗಳನ್ನು ಅಡ್ಡ ಇಟ್ಟುಕೊಂಡು ಇಬ್ಬರು ಪರಸ್ಪರ ದೂಡಾಡಿಕೊಳ್ಳುತ್ತಾ, ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಗಲಾಟೆ ಮಾಡುತ್ತಿದ್ದರು.

ಪೊಲೀಸರು ಸಮವಸ್ತ್ರದಲ್ಲಿದ್ದರೂ ಸಹ ಅವರು ಜಗಳ ಮುಂದುವರಿಸಿ ಕೈ-ಕೈ ಮಿಲಾಯಿಸಿ ಹೊಡೆದಾಡಲು ಮುಂದಾಗಿದ್ದರು. ಕೂಡಲೇ ಪೊಲೀಸರು ಇಬ್ಬರನ್ನೂ ಹಿಡಿದು ಗಲಾಟೆ ನಿಯಂತ್ರಿಸಿದ್ದಾರೆ.

ಬಂಧಿತ ಆರೋಪಿಗಳು ಮೊಹಮ್ಮದ್ ಮುಝಮ್ಮಿಲ್ (21) ನವದುರ್ಗಾ ಬಸ್ ನಂ. KA-14-D-2328 ನ ಕಂಡಕ್ಟರ್ ,ಅಬ್ದುಲ್ ಹಮೀದ್ (50) ಶ್ರೀ ದುರ್ಗಾಂಬ ಬಸ್ ನಂ. KA-20-AC-4542 ನ ಕಂಡಕ್ಟರ್ ಎಂದು ಗುರುತಿಸಲಾಗಿದೆ.

ಇಬ್ಬರೂ ಬಸ್ ಟೈಮಿಂಗ್ಸ್ ವಿಚಾರವಾಗಿ ಜಗಳ ಮಾಡಿಕೊಂಡು, ಬಸ್ಸುಗಳನ್ನು ಅಡ್ಡ ಇಟ್ಟು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಮಾಡಿ, ಸಾರ್ವಜನಿಕ ಸ್ಥಳದಲ್ಲಿ ಭಯ ಮತ್ತು ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2026, ಕಲಂ 194(2) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.