ಉಡುಪಿ: ನಗರದ ಅಜ್ಜರಕಾಡು ವಾರ್ಡ್ನ ಕಾಡಬೆಟ್ಟು ಕಾಲೊನಿಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದು, ಹಲವು ಮನೆಗಳ ಸದಸ್ಯರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸುರೇಂದ್ರ (ಸೂರಿ) ಆಚಾರ್ಯ ಹಾಗೂ ಡೊಮಿನಿಕ್ ಮಸ್ಕರೇನ್ಹಸ್ ಅವರು ಕಾಲೊನಿಯ ಸಮಸ್ಯೆಯನ್ನು ಪ್ರಸಾದ್ ರಾಜ್ ಕಾಂಚನ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅವರು ಕಾಡಬೆಟ್ಟು ಕಾಲೊನಿಗೆ ಭೇಟಿ ನೀಡಿದರು.
ಈ ವೇಳೆ ಸ್ಥಳೀಯ ನಿವಾಸಿಗಳು, ಕಾಲೊನಿಯಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯದೇ ದುರ್ವಾಸನೆ ಉಂಟಾಗುತ್ತಿದೆ. ನಗರಸಭೆಯಿಂದ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಪರಿಣಾಮವಾಗಿ ಬಹುತೇಕ ಮನೆಗಳಲ್ಲಿ ಮೂರರಿಂದ ನಾಲ್ಕು ಮಂದಿ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಭೀತಿ ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡರು.
ಬಳಿಕ ಪ್ರಸಾದ್ ರಾಜ್ ಕಾಂಚನ್ ಅವರು ಉಡುಪಿ ನಗರಸಭೆ ಆಯುಕ್ತ ಮಹಂತ್ತೇಶ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಕಾಡಬೆಟ್ಟು ಕಾಲೊನಿಯ ಸ್ವಚ್ಛತೆ ಹಾಗೂ ಚರಂಡಿ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಅಗತ್ಯ ಆರೋಗ್ಯ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುರೇಂದ್ರ (ಸೂರಿ) ಆಚಾರ್ಯ, ಡೊಮಿನಿಕ್ ಮಸ್ಕರೇನ್ಹಸ್, ಸುರೇಶ್ ಶೆಟ್ಟಿ ಬನ್ನಂಜೆ, ಪ್ರಶಾಂತ್ ಪೂಜಾರಿ, ಸಜ್ಜನ್ ಶೆಟ್ಟಿ, ಸದಾನಂದ ಮುಲ್ಯ, ಸುರೇಶ್ ಕುಂದರ್, ಶರತ್ ಕುಂದರ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.




