ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ರಾಜಧಾನಿ ದೆಹಲಿಯಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿ ಬೆಂಗಳೂರಿಗೆ ತರುತ್ತಿದ್ದ ಬೆಳ್ತಂಗಡಿ ಮೂಲದ ಇಬ್ಬರನ್ನು ಬಾಗಲಕೋಟೆ ಜಿಲ್ಲೆಯಲ್ಲಿ ದಸ್ತಗಿರಿ ಮಾಡಿದ್ದು ಅವರ ಬಳಿಯಿದ್ದ ಬೃಹತ್ ಪ್ರಮಾಣದ ಐದು ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ಅಲ್ಪಾಜ್(28) ಮತ್ತು ಉಜಿರೆ ಲಾಯಿಲ ನಿವಾಸಿ ಮೊಹಮ್ಮದ್ ಮುಸ್ತಾಫಾ (28) ಎಂದು ಗುರುತಿಸಲಾಗಿದೆ.
ಕಳೆದ ಜೂನ್ 25ರಂದು ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಬಳಿಯ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಅಣ್ಣಪ್ಪ ಸ್ವಾಮಿ @ ಮನು ಎಂಬಾತನನ್ನು ದಸ್ತಗಿರಿ ಮಾಡಿದ್ದರು. ಆತನ ವಶದಿಂದ 1,50,000/- ರೂ. ಮೌಲ್ಯದ 15.17 ಗ್ರಾಂ ಮಾದಕ ವಸ್ತು ಎಂಡಿಎಂಎ ಸ್ವಾಧೀನಪಡಿಸಲಾಗಿತ್ತು. ಆತನಿಗೆ ಡ್ರಗ್ಸ್ ಪೂರೈಕೆ ಎಲ್ಲಿಂದ ಆಗುತ್ತಿದೆ ಎಂಬ ಮಾಹಿತಿ ಬೆನ್ನತ್ತಿದ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದರು.
ದೆಹಲಿಯಿಂದ ಮಾದಕವಸ್ತು ಖರೀದಿಸಿ ಬೆಂಗಳೂರಿಗೆ ತರಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಗೆ ದಾಳಿ ನಡೆಸಿ ಮಾದಕ ವಸ್ತುವನ್ನು ಹೊಂದಿದ್ದ ಆರೋಪಿಗಳಾದ ಅಲ್ಪಾಜ್ ಮತ್ತು ಮುಸ್ತಫಾ ಎಂಬವರನ್ನು ಬಲೆಗೆ ಕೆಡವಿದ್ದಾರೆ. ಆರೋಪಿಗಳ ವಶದಿಂದ ಒಟ್ಟು 5 ಕೋಟಿ 20 ಲಕ್ಷ ರೂ. ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ, ಬ್ಯಾಗ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಲಾಗಿದೆ.
ಆರೋಪಿ ಮೊಹಮ್ಮದ್ ಅಲ್ಪಾಜ್ ಎಂಬಾತನ ವಿರುದ್ಧ ಈ ಹಿಂದೆ 2024 ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಾಗೂ 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಎಂ.ಡಿ.ಎಂ.ಎ ಮಾರಾಟ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಗಳು ಕಾರಿನಲ್ಲಿ ದೆಹಲಿಯಿಂದ ಮಾದಕ ವಸ್ತುವನ್ನು ಖರೀದಿಸಿ, ಬೆಂಗಳೂರು ನಗರವನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದರು. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.









