Home Karavali Karnataka ರೈಲ್ವೇ ಟಿಟಿ ಸಮಯಪ್ರಜ್ಞೆ : ಶಾಲೆಯಿಂದ ತಪ್ಪಿಸಿಕೊಂಡ ಬಾಲಕನ ರಕ್ಷಣೆ…!!

ರೈಲ್ವೇ ಟಿಟಿ ಸಮಯಪ್ರಜ್ಞೆ : ಶಾಲೆಯಿಂದ ತಪ್ಪಿಸಿಕೊಂಡ ಬಾಲಕನ ರಕ್ಷಣೆ…!!

ಉಡುಪಿ : ಗೋವಾದ ವಸತಿ ಶಾಲೆಯೊಂದರಿಂದ ತಪ್ಪಿಸಿಕೊಂಡು ಬಂದು ಮ್ಯಾಂಗಳೋರ್ ಎಕ್ಸಪ್ರೆಸ್ ನಲ್ಲಿ ಊರು ಬಿಟ್ಟು ಓಡಿ ಹೋಗಲು ಯತ್ನಿಸಿದ್ದ ಬಾಲಕನೋರ್ವನನ್ನು ರೈಲ್ವೇಯ ಹೆಡ್ ಟಿಟಿ ಓರ್ವರ ಸಮಯ ಪ್ರಜ್ಞೆಯಿಂದ ಕೊಂಕಣ ರೈಲ್ವೆಯ ಉಡುಪಿ ರೈಲು ನಿಲ್ದಾಣದಲ್ಲಿ ರಕ್ಷಿಸಲಾಗಿದೆ.

ಹೆಡ್ ಟಿಟಿ ರಾಘವೇಂದ್ರ ಶೆಟ್ಟಿ ಅವರು ಗುರುವಾರ ರೈಲು ಸಂಖ್ಯೆ 12133ರ ಎಸ್3 ಬೋಗಿಯಲ್ಲಿ ವಸತಿ ಶಾಲೆಯಿಂದ ತಪ್ಪಿಸಿಕೊಂಡು ಬಂದ 13 ವರ್ಷದ ಬಾಲಕನನ್ನು ಪತ್ತೆ ಹಚ್ಚಿದ್ದರು. ಸಂಶಯಾಸ್ಪದವಾಗಿ ಕಂಡ ಆತನ ಬ್ಯಾಗ್ ನಲ್ಲಿ ಸ್ಕೂಲ್ ಐಡಿ ಪತ್ತೆ ಮಾಡಿ, ಅದರಲ್ಲಿನ ಮಾಹಿತಿಯಂತೆ ತಕ್ಷಣವೇ ಸಂಬಂಧಿತ ಶಾಲಾ ಆಡಳಿತ ಮತ್ತು ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಬಾಲಕನ ತಾಯಿ ಮನೆವಾರ್ತೆ ಕೆಲಸ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಬಳಿಕ ಉಡುಪಿ ರೈಲು ನಿಲ್ದಾಣದಲ್ಲಿ ರೈಲ್ವೇ ಪ್ರೊಟೆಕ್ಷನ್ ಪೊಲೀಸರ ಒಪ್ಪಿಸಿದರು. ರೈಲ್ವೇ ಟಿಟಿ ಶೀರೂರಿನ ರಾಘವೇಂದ್ರ ಶೆಟ್ಟಿ ಅವರ ತ್ವರಿತ ಹಾಗೂ ಜವಾಬ್ದಾರಿಯುತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು ರೂ. 5000 ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.