ಉಡುಪಿ: ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ₹2,38,750 ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪಿರ್ಯಾದಿದಾರರ ವಾಟ್ಸಾಪ್ ಸಂಖ್ಯೆಯನ್ನು ಅಪರಿಚಿತರು ‘CORSEL M37’ ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದರು. ಈ ಗ್ರೂಪ್ನಲ್ಲಿ ಸಂಸ್ಥೆಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ವಿವಿಧ ಚಾನೆಲ್ಗಳನ್ನು ಫಾಲೋ ಮಾಡಿ, ಲೈಕ್ ಮಾಡಿದರೆ ಹಣ ನೀಡುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ಪಿರ್ಯಾದಿದಾರರಿಗೆ ಆರಂಭದಲ್ಲಿ ಕಮಿಷನ್ ರೂಪದಲ್ಲಿ ಸುಮಾರು ₹4,000 ಹಣ ಜಮೆಯಾಗಿತ್ತು.
ನಂತರ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ನಂಬಿಸಿ ಟೆಲಿಗ್ರಾಂ ಆ್ಯಪ್ ಡೌನ್ಲೋಡ್ ಮಾಡಿಸಿ, ಅದರಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಮೊದಲಿಗೆ ₹2,000 ವರ್ಗಾಯಿಸಿದಾಗ ₹3,000 ಲಾಭದ ರೂಪದಲ್ಲಿ ಜಮೆಯಾಗಿದ್ದರಿಂದ ಪಿರ್ಯಾದಿದಾರರು ಇದನ್ನು ನಂಬಿದ್ದರು.
ಬಳಿಕ ಕೆನರಾ ಬ್ಯಾಂಕ್ ಖಾತೆಯಿಂದ ₹1,26,550, ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹1,05,200 ಹಾಗೂ ಯುಪಿಐ ಮೂಲಕ ₹7,000 ಸೇರಿದಂತೆ ಒಟ್ಟು ₹2,38,750 ಹಣವನ್ನು 2026ರ ಆಗಸ್ಟ್ 28ರಿಂದ ಅಕ್ಟೋಬರ್ 3ರವರೆಗೆ ಹಂತ ಹಂತವಾಗಿ ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.
ನಂತರ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಆರೋಪಿಗಳು ಒತ್ತಾಯಿಸಿದ್ದು, ಈಗಾಗಲೇ ಹೂಡಿಕೆ ಮಾಡಿದ್ದ ಹಣವನ್ನು ಹಿಂಪಡೆಯಲು ಹೆಚ್ಚುವರಿ ಶುಲ್ಕ ಪಾವತಿಸುವಂತೆ ತಿಳಿಸಿದ್ದರು. ಆದರೆ ಹಣ ಹಿಂಪಡೆಯಲು ಸಾಧ್ಯವಾಗದೆ, ಅಪರಿಚಿತ ವ್ಯಕ್ತಿಗಳು ಸಂದೇಶಗಳಿಗೂ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ತಾನು ಆನ್ಲೈನ್ ವಂಚನೆಗೆ ಒಳಗಾಗಿರುವುದು ಪಿರ್ಯಾದಿದಾರರಿಗೆ ತಿಳಿದುಬಂದಿದೆ.
ಈ ಸಂಬಂಧ ಹಣದ ಆಮಿಷವೊಡ್ಡಿ ವಂಚಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಿರ್ಯಾದಿದಾರರು ದೂರು ನೀಡಿದ್ದಾರೆ.



