Home Crime ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರ ಬಿಡುಗಡೆ

ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರ ಬಿಡುಗಡೆ

ಮಂಗಳೂರು : ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಆರೋಪಿಗಳ ಗುರುತು ಪತ್ತೆಹಚ್ಚಿರುವ ಮಂಗಳೂರು ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ್ದು ಅವರ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

 

ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ಎಂದು ಗುರುತಿಸಲಾಗಿದ್ದು, ಒಟ್ಟು 14 ಮಂದಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಕೇರಳದ ವಿವಿಧ ಜಿಲ್ಲೆಗಳು ಹಾಗೂ ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ.

 

ಆರೋಪಿಗಳ ಪೈಕಿ ಶ್ರೀರಾಗ್, ಅತುಲ್, ಮಿಥುನ್‌ಲಾಲ್, ಅಜೀರ್ ತರಾಯಿಲ್, ವೈತಾಕ್, ಆಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಮತ್ತು ಕೊಡಗಿನ ಉಬೈದ್ ಸೇರಿದಂತೆ ಒಟ್ಟು 14 ಮಂದಿಯ ಗುರುತುಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

 

ಕೊಡಗು ಮೂಲದ ಕೆಲವರು ಕೂಡ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.

 

ಜೂನ್ 29ರ ನಸುಕಿನಲ್ಲಿ ಮಂಗಳೂರಿನ ಬೈಕಂಪಾಡಿ ಬಳಿಯ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಯ್ಯನ್ನೂರು ಮೂಲದ ವ್ಯಾಪಾರಿ ವಿಕಾಸ್ ಮೇಲೆ ಹಲ್ಲೆ ನಡೆಸಿ ಸುಮಾರು 180 ಗ್ರಾಂ ಚಿನ್ನ ಹಾಗೂ ಒಟ್ಟು 23 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಲಾಗಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪಣಂಬೂರು ಠಾಣೆ ಪೊಲೀಸರು ನಿಮಿಲ್ (ತಲಕ್ಕೇರಿ), ಇರ್ಷಾದ್ (ಮಡಿಕೇರಿ) ಮತ್ತು ಮುಸ್ತಾಫ ಅವರನ್ನು ಬಂಧಿಸಲಾಗಿದೆ.

 

ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸರು ಕೇರಳ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸಾರ್ವಜನಿಕರು ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.