ಕೊಪ್ಪಳ : ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ನಡೆದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ದೋಷಿಗಳು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಪ್ರಕರಣ ದಾಖಲಾದ 9 ತಿಂಗಳ ಒಳಗೆ ತೀರ್ಪು ನೀಡಿರುವ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಫೆ.16ರಂದು ಪ್ರಕಟಿಸುವುದಾಗಿ ತಿಳಿಸಿದೆ. ಈ ಪ್ರಕರಣದಲ್ಲಿ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯ ಸಾಯಿ) ಹಾಗೂ ಶರಣಪ್ಪ (ಶರಣು ಬಸವರಾಜ್) ಎಂಬ ಮೂವರು ಆರೋಪಿಗಳು ದೋಷಿಗಳು ಎಂದು ಘೋಷಿಸಿದೆ.
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ, ಐವರು ಪ್ರವಾಸಿಗರ ತಂಡ ಸಣಾಪುರ ಕೆರೆ ಬಳಿ ತೆರಳಿದ್ದ ವೇಳೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು.
ಹಲ್ಲೆಯ ಪರಿಣಾಮ ಒಡಿಶಾ ಮೂಲದ ಬಿಬಾಶ್ ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೇ ವೇಳೆ ಇಸ್ರೇಲ್ ಮೂಲದ ಮಹಿಳೆ ಹಾಗೂ ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು.



