Home Crime ಬೈಂದೂರು ಸರಕಾರಿ ಬಸ್ ನಿಲ್ದಾಣಕ್ಕೆ ಪ್ರವೇಶ ದಾರಿ ಸಮಸ್ಯೆ : ತಕ್ಷಣ ಬಗೆಹರಿಸಲು ನಾಗರಿಕ ಸಮಿತಿ...

ಬೈಂದೂರು ಸರಕಾರಿ ಬಸ್ ನಿಲ್ದಾಣಕ್ಕೆ ಪ್ರವೇಶ ದಾರಿ ಸಮಸ್ಯೆ : ತಕ್ಷಣ ಬಗೆಹರಿಸಲು ನಾಗರಿಕ ಸಮಿತಿ ಒತ್ತಾಯ…!!

ಬೈಂದೂರು: ಹಲವು ವರ್ಷಗಳ ಕನಸಾಗಿ ಉಳಿದಿದ್ದ ಬೈಂದೂರು ಸರಕಾರಿ ಬಸ್ ನಿಲ್ದಾಣವು ಇತ್ತೀಚೆಗೆ ಸಾರ್ವಜನಿಕ ಬಳಕೆಗೆ ತೆರೆಯಲಾಗಿದೆ. ಡಿಸೆಂಬರ್ 27ರಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನಿಲ್ದಾಣವನ್ನು ಉದ್ಘಾಟಿಸಿದರು.

ಆದರೆ, ನಿಲ್ದಾಣ ಆರಂಭವಾದ ಕೆಲವೇ ದಿನಗಳಲ್ಲಿ ಪ್ರವೇಶ ದಾರಿ ಸಮಸ್ಯೆ ಎದುರಾಗಿದೆ. ವಿಶೇಷವಾಗಿ ಮಂಗಳೂರು ಹಾಗೂ ಉಡುಪಿ ಭಾಗದಿಂದ ಬರುವ ಬಸ್ಸುಗಳಿಗೆ ನಿಲ್ದಾಣಕ್ಕೆ ಪ್ರವೇಶಿಸಲು ಸೂಕ್ತ ಮಾರ್ಗದ ಅಭಾವದಿಂದ ಪ್ರಯಾಣಿಕರು ಹಾಗೂ ಚಾಲಕರಿಗೆ ತೊಂದರೆ ಉಂಟಾಗಿದೆ.

ಕೊಲ್ಲೂರು ಬೈಪಾಸ್ ಬಳಿ ಹೆದ್ದಾರಿಯ ಪಕ್ಕ ಸರ್ವಿಸ್ ರಸ್ತೆಯ ವ್ಯವಸ್ಥೆ ಇಲ್ಲದಿರುವುದರಿಂದ ಬಸ್ ನಿಲ್ದಾಣ ಪ್ರವೇಶದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ನಾಗರಿಕ ಸಮಿತಿ ಅಧ್ಯಕ್ಷ ರವೀಂದ್ರ ಶೇಟ್ ತಿಳಿಸಿದ್ದಾರೆ. ಭಟ್ಕಳ ಮತ್ತು ಹುಬ್ಬಳ್ಳಿ ಭಾಗದಿಂದ ಬರುವ ಬಸ್ಸುಗಳಿಗೆ ಪ್ರವೇಶ ಸುಗಮವಾಗಿದ್ದರೂ, ಇತರ ದಿಕ್ಕಿನಿಂದ ಬರುವ ವಾಹನಗಳಿಗೆ ಅಡಚಣೆ ಉಂಟಾಗುತ್ತಿದೆ.

ಸುಮಾರು 8.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಬಸ್ ನಿಲ್ದಾಣದ ಪ್ರಯೋಜನ ಸಂಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಸಂಸದರು ಸಂಬಂಧಪಟ್ಟ ರಸ್ತೆ ಅಧಿಕಾರಿಗಳು ಮತ್ತು ಐಆರ್‌ಬಿ ಸಂಸ್ಥೆಯೊಂದಿಗೆ ತಕ್ಷಣ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.