ಪಡುಬಿದ್ರಿ : ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಹಾಗೂ ಗ್ಲಿಸರಿನ್ ಉತ್ಪಾದನಾ ಘಟಕ ಮೆಸರ್ಸ್ ಎಂ11 ಎನರ್ಜಿಟ್ರಾನ್ಸಿಸನ್ ಪ್ರೈವೆಟ್ ಲಿ.ನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.
ಕರ್ನಾಟಕ ವಾಟರ್ (ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ ಆಫ್ ಪೊಲ್ಯೂಶನ್) ಆ್ಯಕ್ಟ್‌ನ 34ನೇ ನಿಯಮದಡಿ ಈ ಘಟಕದ ಕಾರ್ಯಾಚರಣೆಯನ್ನು ನಿಲ್ಲಿಸಲು ಮಂಡಳಿ ನಿರ್ದೇಶನ ನೀಡಿದೆ.
ನಂದಿಕೂರು ಕೈಗಾರಿಕಾ ಪ್ರದೇಶದ ಪ್ಲಾಟ್ ನಂ.155 ಮತ್ತು 169 ರಲ್ಲಿ ಈ ಘಟಕ ಕಾರ್ಯಾಚರಿಸುತ್ತಿತ್ತು. ಕಾಯ್ದೆಯ ನಿಬಂಧನೆಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಘಟಕದಿಂದ ಆಗುತ್ತಿರುವ ವಿವಿಧ ರೀತಿಯ ಮಾಲಿನ್ಯ ಹಾಗೂ ಅದರಿಂದ ಹೊರಬರುತ್ತಿರುವ ದುರ್ವಾಸನೆಯಿಂದ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು, ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಕಳೆದ ಪಲಿಮಾರು ಗ್ರಾಮಸಭೆ ಯಲ್ಲೂ ಕಂಪೆನಿ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು.
ದುರ್ವಾಸನೆ ಸಮಸ್ಯೆ ಕುರಿತು ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿ ಪರಿಸರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸ್ಥಳೀಯರ ದೂರಿನ ಮೇರೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಲವು ಬಾರಿ ಘಟಕಕ್ಕೆ ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕೊಂಡೊಯ್ದಿದ್ದರು.
ತಜ್ಞರ ವರದಿ ಆಧರಿಸಿ ಕಂಪೆನಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮಂಡಳಿ ಆದೇಶಿಸಿದ್ದು, ಕಂಪೆನಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಫೆ.18 ರಂದು ಆದೇಶವನ್ನು ಹೊರಡಿಸಿದೆ. ಮುಂದಿನ ಆದೇಶದವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಘಟಕವನ್ನು ಮುಚ್ಚುವಂತೆ ತಿಳಿಸಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಅವರು ಇಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಘಟಕದ ವಿದ್ಯುತ್ ಸಂಪರ್ಕವನ್ನು ಕೂಡಲೇ ನಿಲ್ಲಿಸುವಂತೆ ಮೆಸ್ಕಾಂನ ಆಡಳಿತ ನಿರ್ದೇಶಕರಿಗೂ ಸೂಚಿಸಲಾಗಿದೆ.
ಪರಿಸರ ಮಂಡಳಿ ಪದೇ ಪದೇ ನೀಡಿದ ಆದೇಶವನ್ನು ಪಾಲಿಸದೇ ಉಲ್ಲಂಘಿಸಲಾಗಿದ್ದು, ಮಾಲಿನ್ಯವನ್ನು ತಡೆಯಲು, ಮಾಲಿನ್ಯಕಾರಕ ತ್ಯಾಜ್ಯದ ನೀರನ್ನು ಆವರಣದ ಹೊರಗೆ ಬಿಡದಂತೆ ಸೂಚಿಸಿದ್ದರೂ ಆದೇಶವನ್ನು ಉಲ್ಲಂಘಿಸಿ ತ್ಯಾಜ್ಯದ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ತ್ಯಾಜ್ಯದ ನೀರನ್ನು ಆವರಣದೊಳಗೆ ಮುಕ್ತವಾಗಿ ಸಂಗ್ರಹಿಸಿರುವುದು ಮಂಡಳಿಯ ಸ್ಥಳೀಯ ಅಧಿಕಾರಿಗಳು ತನಿಖೆಗಾಗಿ ಬಂದಾಗ ಕಂಡುಬಂದಿತ್ತು ಎಂದೂ ಮಂಡಳಿ ತಿಳಿಸಿದೆ.



