Home Crime ಅಜ್ಮೀರ್‌ನಿಂದ ಮರಳುತ್ತಿದ್ದ ವೇಳೆ ವೃದ್ಧ ನಾಪತ್ತೆ; ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಅಜ್ಮೀರ್‌ನಿಂದ ಮರಳುತ್ತಿದ್ದ ವೇಳೆ ವೃದ್ಧ ನಾಪತ್ತೆ; ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೈಂದೂರು, ಜೂ.30: ಅಜ್ಮೀರ್ ದರ್ಗಾ ದರ್ಶನ ಮುಗಿಸಿ ಕುಟುಂಬದೊಂದಿಗೆ ಕಾಸರಗೋಡಿಗೆ ಮರಳುತ್ತಿದ್ದ ವೇಳೆ 68 ವರ್ಷದ ವೃದ್ಧರೊಬ್ಬರು ರೈಲಿನಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕಾಸರಗೋಡು ಮೂಲದ ಮುಸ್ತಪಾ (38) ಅವರು ನೀಡಿದ ದೂರಿನ ಪ್ರಕಾರ, ತಮ್ಮ ತಂದೆ ಮುಸಾ ಅಲಿಯಾಸ್ ಅಬುಸಾಲಿ (68) ಹಾಗೂ ಕುಟುಂಬದವರು ಜೂನ್ 22ರಂದು ಕಾಸರಗೋಡಿನಿಂದ ಅಜ್ಮೀರ್‌ಗೆ ರೈಲಿನಲ್ಲಿ ತೆರಳಿ, ಜೂನ್ 23ರಂದು ದರ್ಗಾ ದರ್ಶನ ಮಾಡಿದ್ದರು. ಬಳಿಕ ಜೂನ್ 26ರಂದು ಅಜ್ಮೀರ್ ರೈಲು ನಿಲ್ದಾಣದಿಂದ ಮುರುಸಾದ್ ಎಕ್ಸ್‌ಪ್ರೆಸ್ ರೈಲಿನ ಎಸ್-4 ಬೋಗಿಯಲ್ಲಿನ ಕಾಯ್ದಿರಿಸಿದ ಆಸನಗಳಲ್ಲಿ ಕಾಸರಗೋಡಿಗೆ ಪ್ರಯಾಣ ಆರಂಭಿಸಿದ್ದರು.

ಜೂನ್ 27ರಂದು ರಾತ್ರಿ ಸುಮಾರು 10 ಗಂಟೆಗೆ ಕಾರವಾರ ಸಮೀಪ ಕುಟುಂಬದೊಂದಿಗೆ ಊಟ ಮಾಡಿ ಎಲ್ಲರೂ ಮಲಗಿದ್ದರು. ಬಳಿಕ ಮುಂಜಾನೆ ಸುಮಾರು 1 ಗಂಟೆ ವೇಳೆಗೆ ರೈಲು ಮಂಗಳೂರು ಸಮೀಪ ತಲುಪಿದಾಗ ಮುಸಾ ಅಬುಸಾಲಿ ಅವರು ತಮ್ಮ ಆಸನದಲ್ಲಿ ಕಾಣಿಸದೇ ಇದ್ದರು. ಕುಟುಂಬದವರು ಬೋಗಿ ಹಾಗೂ ಶೌಚಾಲಯಗಳಲ್ಲಿ ಹುಡುಕಿದರೂ ಅವರು ಪತ್ತೆಯಾಗಿಲ್ಲ.

ವಯೋವೃದ್ಧರಾದ ಮುಸಾ ಅಬುಸಾಲಿ ಅವರು ನಡೆಯಲು ವಾಕಿಂಗ್ ಸ್ಟಿಕ್ ಬಳಸುತ್ತಿದ್ದರು. ರೈಲು ಎಲ್ಲೋ ನಿಂತ ವೇಳೆ ಯಾವುದಾದರೂ ನಿಲ್ದಾಣದಲ್ಲಿ ಇಳಿದು ದಿಕ್ಕುತಪ್ಪಿ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಬೈಂದೂರು ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.