Home Crime ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ; ಲಾರಿ ವಶಕ್ಕೆ, ಚಾಲಕನ ವಿರುದ್ಧ ಪ್ರಕರಣ

ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ; ಲಾರಿ ವಶಕ್ಕೆ, ಚಾಲಕನ ವಿರುದ್ಧ ಪ್ರಕರಣ

ಕಾರ್ಕಳ, ಜೂ.30: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜೂನ್ 29ರಂದು ಬೆಳಿಗ್ಗೆ ಸುಮಾರು 9:30ಕ್ಕೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಬಾರಾಡಿ ಕ್ರಾಸ್ ಬಳಿ ಚೆಕ್‌ಪೋಸ್ಟ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ನಾಗರಾಜ ಅವರು ಮೂಡಬಿದ್ರಿ ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ KA-19-AD-8314 ಸಂಖ್ಯೆಯ ಲಾರಿಯನ್ನು ತಪಾಸಣೆ ನಡೆಸಿದರು.

ಪರಿಶೀಲನೆ ವೇಳೆ ಲಾರಿಯಲ್ಲಿ ಸುಮಾರು 300 ಕೆಂಪು ಕಲ್ಲುಗಳು ತುಂಬಿರುವುದು ಕಂಡುಬಂದಿದೆ. ಈ ಕುರಿತು ಚಾಲಕ ಅಭಿಲಾಶ್ ಶೆಟ್ಟಿಯನ್ನು ವಿಚಾರಿಸಿದಾಗ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲೂಕಿನ ಕೊಡ್ಯಡ್ಕ ಪ್ರದೇಶದ ಸರ್ಕಾರಿ ಸ್ಥಳವೊಂದರಿಂದ ಕಳವು ಮಾಡಿ ತೆಗೆದಿದ್ದ ಕೆಂಪು ಕಲ್ಲುಗಳನ್ನು ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 303(2) ಹಾಗೂ ಐಎಂವಿ ಕಾಯ್ದೆಯ ಕಲಂ 66 ಮತ್ತು 192(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.