ಬೈಂದೂರು : ಯುಬಿಎಸ್ ಅಂಗ್ಲ ಮಾಧ್ಯಮ ಶಾಲೆ ಮತ್ತು ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗಳ ಜಂಟಿ ವಾರ್ಷಿಕ ಕ್ರೀಡೋತ್ಸವ ಶಾಲಾ ವಠಾರದಲ್ಲಿ ಸಂಭ್ರಮದಲ್ಲಿ ನಡೆಯಿತು.
ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ.ಶೆಟ್ಟಿ ವಾರ್ಷಿಕ ಕ್ರೀಡೋತ್ಸವದ ಧ್ವಜಾರೋಹಣಗೈದು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಕ್ರೀಡಾಕೂಟಗಳು ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸುವ ಜತೆಗೆ ಮಾನಸಿಕ ಮತ್ತು ಶಾರೀರಿಕವಾಗಿ ಬಲಗೊಳ್ಳಲು ಸಹಕಾರಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಪ್ರತಿಭೆಗಳಿಗೆ ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸುವ ಅನುಕೂಲತೆ ಹಾಗೂ ಪ್ರೋತ್ಸಾಹ ನೀಡಿದರೆ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿಯೂ ಪ್ರತಿನಿಧಿಸುವ ಅವಕಾಶ ಪಡೆಯಬಲ್ಲರು ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಯೆ. ಸ್ಪರ್ಧೆಯಲ್ಲಿ ಬಹುಮಾನ ಗಳಿಸುವುದಕ್ಕಿಂತ ಭಾಗವಹಿಸುವಿಕೆ ಪ್ರಧಾನವಾಗಿರುತ್ತದೆ. ತೀರ್ಪುಗಾರರ ತೀರ್ಮಾನಕ್ಕೆ ಮನ್ನಣೆ ನೀಡಿ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆದು ಆಘನತೆ, ಗೌರವಕ್ಕೆ ಚ್ಯುತಿಬಾರದಂತೆ ಸ್ಪರ್ಧಾ ಮನೋಭಾವನೆಯಿಂದ ನಡೆದುಕೊಳ್ಳಿ. ಆರೋಗ್ಯವೇ ಭಾಗ್ಯ ಎಂಬ ನೆಲೆಯಲ್ಲಿ ಪ್ರಾಚೀನ ಕಾಲದಿಂದಲೂ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕ್ರೀಡೆ ನಮಗೆ ಸಮಯಪ್ರಜ್ಞೆಯ ಜತೆಗೆ ಸಮನ್ವಯ ಜೀವನದ ಪಾಠ ಕಲಿಸುತ್ತದೆ ಯಶಸ್ಸು ಸುಲಭವಲ್ಲ. ಇದಕ್ಕಾಗಿ ನಿರಂತರ ಪ್ರಾಮಾಣಿಕ ಪ್ರಯತ್ನವೂ ಅಗತ್ಯ ಎಂದರು.
ಆರಂಭದಲ್ಲಿ ಕ್ರೀಡಾಪಟುಗಳಿಂದ ಪಥಸಂಚಲನ ನಡೆಯಿತು. ವಿದ್ಯಾರ್ಥಿ ಝಯೀಮ್ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.
ಯುಬಿಎಸ್ ಆಂಗ್ಲಮಾಧ್ಯಮ ಶಾಲ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಸ್ವಾಗತಿಸಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲ ಮುಖ್ಯಶಿಕ್ಷಕ ರಾಮದಾಸ ವಂದಿಸಿದರು. ಶಿಕ್ಷಣ ಪೂರ್ಣಿಮಾ ಪ್ರಶಾಂತ್ ನಿರೂಪಿಸಿದರು. ವಿವಿಧ ಸ್ಪರ್ಧೆಯ ವಿಜೇತರಿಗೆ ಯಶಶ್ರೀ ಬಿ.ಶೆಟ್ಟಿ ಬಹುಮಾನ ವಿತರಿಸಿದರು.




