ಕಾಪು: ಉಡುಪಿ ಜಿಲ್ಲೆಯ ಕಾಪು ಕೋತಲಕಟ್ಟೆ ಜಂಕ್ಷನ್ ನಲ್ಲಿರುವ ಡೈವರ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಣಿ ಅಪಘಾತ ಸಂಭವಿಸಿ 3 ಕಾರುಗಳು ಜಖಂಗೊಂಡ ಘಟನೆ ಸಂಭವಿಸಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಕಾರು ಕೋತಲಕಟ್ಟೆ ಡಿವೈಡರ್ ಡೈವರ್ಷನ್ ಮೂಲಕ ಹೆದ್ದಾರಿ ಪ್ರವೇಶಿಸಿದ್ದು, ಈ ವೇಳೆ ಉಡುಪಿ ಕಡೆಗೆ ತೆರಳುತ್ತಿದ್ದ ಮತ್ತೊಂದು ಕಾರಿನ ಚಾಲಕ ಅದನ್ನು ತಪ್ಪಿಸಲು ಎಡಕ್ಕೆ ಚಲಾಯಿಸಿದ್ದರು.
ಈ ವೇಳೆ ಅದೇ ದಿಕ್ಕಿನಲ್ಲಿ ಉಡುಪಿಗೆ ತೆರಳುತ್ತಿದ್ದ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರ ಕಾರಿಗೆ ಅದು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಸರಣಿ ಅಪಘಾತದ ಕಾರಣದಿಂದಾಗಿ ಮೂರೂ ಕಾರುಗಳು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಕೆಲವು ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಧಾವಿಸಿದ ಕಾಪು ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.




