ಉಡುಪಿ, ಜೂನ್ 22: ಉಡುಪಿ ಜಿಲ್ಲೆಯ ಸಂತೆಕಟ್ಟೆ ನೇಜಾರಿನಲ್ಲಿ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನುಬದ್ಧ ದತ್ತು ಪ್ರಕ್ರಿಯೆ ಅನುಸರಿಸದೆ ಅನಧಿಕೃತವಾಗಿ ಸಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯಲ್ಲಿ ವೈದ್ಯ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿದ ಮಾಹಿತಿಯ ಮೇರೆಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಜೂನ್ 19ರಂದು ಸಂತೆಕಟ್ಟೆಯ ಸುಬ್ರಮಣ್ಯ ನಗರದಲ್ಲಿರುವ ದಂಪತಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ವೇಳೆ ಪ್ರಕಾಶ್, ಪೂರ್ಣಿಮಾ, ಒಂದು ತಿಂಗಳ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಸಹೋದರಿ ಲಕ್ಷ್ಮಿ ಮನೆಯಲ್ಲಿದ್ದು, ವಿಚಾರಣೆ ವೇಳೆ ಅನುಮಾನಾಸ್ಪದ ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಿಖೆಯಲ್ಲಿ, 11 ವರ್ಷಗಳ ವಿವಾಹ ಜೀವನದಲ್ಲಿಯೂ ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವೇಳೆ ಪರಿಚಯದ ಮೂಲಕ ಆಸ್ಪತ್ರೆಯಲ್ಲಿ ಮಗು ಇರುವ ಮಾಹಿತಿ ತಿಳಿದು ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ನೀಡುವಂತೆ ಕೋರಿದ್ದರೆಂದು ಆರೋಪಿಸಲಾಗಿದೆ.
ಆರೋಪದ ಪ್ರಕಾರ, ವೈದ್ಯರು ಮಗುವನ್ನು ದಂಪತಿಗೆ ನೀಡಿ, ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳನ್ನು ಸಿದ್ಧಪಡಿಸಲು ಸಹಕರಿಸಿದ್ದಾರೆ ಎನ್ನಲಾಗಿದೆ. ಬಳಿಕ ಉಡುಪಿ ನಗರಸಭೆಯಿಂದ ಜನನ ಪ್ರಮಾಣಪತ್ರ ಪಡೆದಿದ್ದು, ಮಗುವಿನ ಜೈವಿಕ ಪೋಷಕರ ಕುರಿತು ದಂಪತಿಗೆ ಯಾವುದೇ ಮಾಹಿತಿ ಇಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದಲ್ಲಿ ಆರೋಪಿಗಳು ಅಕ್ರಮ ಲಾಭದ ಉದ್ದೇಶದಿಂದ ಒಳಸಂಚು ರೂಪಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಗುವನ್ನು ಕಳ್ಳಸಾಗಣೆ ಮೂಲಕ ಹಸ್ತಾಂತರಿಸಿರುವ ಆರೋಪದಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 41/2026 ದಾಖಲಿಸಲಾಗಿದೆ. ಪ್ರಕರಣವು BNS Actನ ಕಲಂ 143(4), 61, 318(2), 3(5) ಹಾಗೂ JJ Actನ ಕಲಂ 81ರಡಿ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಡಾ. ಕೆ. ಸುರೇಂದ್ರ ಕಾಮತ್ (76), ಬನ್ನಂಜೆ, ಉಡುಪಿ ಹಾಗೂ ಎಸ್. ಪ್ರಕಾಶ್ (50), ನೇಜಾರು ಸಂತೆಕಟ್ಟೆ, ಉಡುಪಿ ಅವರನ್ನು ಬಂಧಿಸಲಾಗಿತ್ತು.


ಮತ್ತೆ ಇಬ್ಬರು ಆರೋಪಿಗಳ ಬಂಧನ:
ಪ್ರಕರಣದ ಮುಂದುವರಿದ ತನಿಖೆಯಲ್ಲಿ ಕಾರ್ಕಳ ಮೂಲದ ಸಂಪತ್ (22) ಹಾಗೂ ಕಾರ್ಕಳ ತಾಲೂಕಿನ ನಂದಳಿಕೆ ಕೆದಿಂಜೆ ನಿವಾಸಿ ಸುಪ್ರೀತಿ (22) ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಮಗುವನ್ನು ಕಾನೂನುಬಾಹಿರವಾಗಿ ಹಸ್ತಾಂತರಿಸಿದ ಆರೋಪದಡಿ ಬಂಧಿತ ಇಬ್ಬರನ್ನು ವಶಕ್ಕೆ ಪಡೆದು ಪ್ರಕ್ರಿಯೆ ಪೂರ್ಣಗೊಳಿಸಿರುವ ಪೊಲೀಸರು, ಮುಂದಿನ ಕಾನೂನು ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.




