Home Crime ಕಡಬ ತಹಶಿಲ್ದಾರ್ ಕಚೇರಿಯಲ್ಲಿ ಬ್ರೋಕರ್‌ಗಳ ಆಳ್ವಿಕೆ..? : ಜನರ ಕಚೇರಿಯಲ್ಲಿ ಜನರಿಗೆ ಪ್ರವೇಶವೇ ಸಿಗದ ಸ್ಥಿತಿ…!!

ಕಡಬ ತಹಶಿಲ್ದಾರ್ ಕಚೇರಿಯಲ್ಲಿ ಬ್ರೋಕರ್‌ಗಳ ಆಳ್ವಿಕೆ..? : ಜನರ ಕಚೇರಿಯಲ್ಲಿ ಜನರಿಗೆ ಪ್ರವೇಶವೇ ಸಿಗದ ಸ್ಥಿತಿ…!!

ಕಡಬ : ಸಾರ್ವಜನಿಕರ ಕೆಲಸ ನಡೆಯಬೇಕಾದ ಕಡಬ ತಹಶಿಲ್ದಾರ್ ಕಚೇರಿಯ ಒಳಗಡೆಯೇ ಇದೀಗ “ಬ್ರೋಕರ್‌ಗಳ ರಾಜ್ಯ” ನಡೀತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಚೇರಿಯ ಒಳಗಡೆ ಸಿಬ್ಬಂದಿಗಳ ಕ್ಯಾಬಿನ್ ಒಳಗೆ ಅಕ್ರಮವಾಗಿ ಫೈಲುಗಳ ಕಟ್ಟು ಹಿಡಿದುಕೊಂಡು ಕುಳಿತಿರುವ ಕೆಲವರನ್ನು ಗುರುತಿಸಲಾಗಿದ್ದು, ಇವರು ತಮಗೆ ತಾವೇ “ಜನಪ್ರತಿನಿಧಿಗಳು” ಎಂದು ಪರಿಚಯಿಸಿಕೊಂಡು ಸಾಮಾನ್ಯ ಸಾರ್ವಜನಿಕರ ಜೊತೆ ತಕರಾರು ನಡೆಸಲೂ ಮಂದಾಗುತ್ತಿದ್ದಾರೆ.

ಸ್ಥಳೀಯ ನಾಗರಿಕರ ಪ್ರಕಾರ, ತಹಶಿಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕ್ಕಾಗಿ ದಿನಪತ್ರಿ ಬರುವ ಜನರಿಗೆ ಹೊರಗಡೆ ಕಾಯುವಂತಾಗಿದೆ. ಆದರೆ ಈ ಮಧ್ಯವರ್ತಿಗಳು ನೇರವಾಗಿ ಕಚೇರಿಯ ಸಿಬ್ಬಂದಿಗಳ ಕ್ಯಾಬಿನ್ ಒಳಗೆ ಕುಳಿತು ಫೈಲುಗಳ ಮೇಲೆ ಚರ್ಚೆ ನಡೆಸುತ್ತಿರುವುದು, ಸಹಿಗಳು ಮಾಡಿಸುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಇದನ್ನು ಪ್ರಶ್ನಿಸಿದಾಗ “ನಾನು ಜನಪ್ರತಿನಿಧಿ, ನೀವು ಯಾರು ಕೇಳೋಕೆ ಇಲ್ಲಿನ ತಹಶಿಲ್ದಾರಾ?” ಎಂದು ಅಸಹ್ಯವಾಗಿ ಪ್ರತಿಕ್ರಿಯೆ ನೀಡುವಷ್ಟೂ ಮುಂದಾಗುತ್ತಿದ್ದಾರೆ ಎಂಬ ಆರೋಪವೂ ಹೊರಬಿದ್ದಿದೆ.

ಸ್ಥಳದಲ್ಲಿದ್ದ ಕೆಲವರು ಹೇಳುವ ಪ್ರಕಾರ, ಇಂತಹವರು “ಮಧ್ಯವರ್ತಿ” (ಬ್ರೋಕರ್‌ಗಳು) ಆಗಿದ್ದು, ಕಚೇರಿಯ ಅಧಿಕಾರಿಗಳ ಸಹಕಾರದಿಂದ ಜನರ ಕೆಲಸಕ್ಕೆ ಇಂತಿಷ್ಟು ಲೆಕ್ಕಾಚಾರ ಪ್ರಕಾರ ಹಣ ಪಡೆದು ನಡೆಯುವವರಂತೆ ವರ್ತಿಸುತ್ತಿದ್ದಾರೆ. “ಸರ್ಕಾರಿ ಕಚೇರಿ ಜನರದ್ದು, ಆದರೆ ಇಲ್ಲಿ ಜನರು ಹೊರಗಡೆ ನಿಲ್ಲಬೇಕು — ಒಳಗಡೆ ಕೆಲವರಿಗೆ ಮಾತ್ರ ಪ್ರವೇಶ” ಎಂಬ ದುಃಖದ ಚಿತ್ರಣ ನಾಗರಿಕರು ಹಂಚಿಕೊಂಡಿದ್ದಾರೆ.

ಸ್ಥಳೀಯರು ಜಿಲ್ಲಾ ಆಡಳಿತವನ್ನು ವಿನಂತಿಸಿಕೊಂಡಿದ್ದು — ಕಚೇರಿಯ ಒಳಗಡೆ ನಿತ್ಯ ಹಾಜರಾಗುವ “ಬ್ರೋಕರ್‌ಗಳ” ಪಟ್ಟಿಯನ್ನು ಪರಿಶೀಲಿಸಿ, ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ತರಬೇಕೆಂದು ಒತ್ತಾಯಿಸಿದ್ದಾರೆ.

ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, “ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಗೆ ಬೇರೆ ಬೇರೆ ಕಾನೂನುಗಳಿವೆಯಾ?” ಎಂಬ ಪ್ರಶ್ನೆ ಎದ್ದಿದೆ. ಅಧಿಕಾರಿಗಳ ವರ್ತನೆ ಮತ್ತು ಕಚೇರಿಯ ಒಳಗಿನ ಅನೌಪಚಾರಿಕ ಸಂಪರ್ಕಗಳ ಬಗ್ಗೆ ಜನರು ಕಡಬ ತಹಶಿಲ್ದಾರ್ ಹಾಗೂ ಜಿಲ್ಲಾ ಆಡಳಿತದಿಂದ ಸ್ಪಷ್ಟನೆ ಮತ್ತು ಕ್ರಮವನ್ನು ಆಗ್ರಹಿಸಿದ್ದಾರೆ.