Home Art & Entertainment ಎಂಟನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ 

ಎಂಟನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ 

ಉಡುಪಿ : ನಿರಂತರ್ ಉದ್ಯಾವರ ಸಂಘಟನೆಯ ಎಂಟನೇ ವರ್ಷದ ನಾಲ್ಕು ದಿನದ ಬಹುಭಾಷಾ ನಾಟಕೋತ್ಸವಕ್ಕೆ ನಿನ್ನೆ ಚಾಲನೆ ದೊರಕಿತು. ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫೆಬ್ರವರಿ 5ರಿಂದ 8ರವರೆಗೆ ನಾಲ್ಕು ಭಾಷೆಯಲ್ಲಿ ನಾಲ್ಕು ನಾಟಕಗಳು ಪ್ರದರ್ಶನವಾಗಲಿದೆ.

ಕುಂಟಲನಗರ ಸಂತ ಅಂತೋನಿಯವರ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಫಾ. ಸ್ಟ್ಯಾನಿ ಬಿ. ಲೋಬೋ ರವರು, ವೇದಿಕೆಯಲ್ಲಿರುವ ಎಲ್ಲಾ ಅತಿಥಿಗಳ ಜೊತೆ ತಮಟೆ (ದುಡಿ) ಬಾರಿಸುವ ಮೂಲಕ ನಾಟಕೋತ್ಸವವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಂಗಭೂಮಿಯ ಮೂಲಕ ನಮ್ಮ ಸಮಾಜ ಬೆಳಗಬೇಕಾಗಿದೆ. ಇದು ಖಂಡಿತ ಸಾಧ್ಯವಿದೆ. ಒಳ್ಳೆಯ ಮನಸ್ಥಿತಿಯ ಕಲಾಭಿಮಾನಿಗಳು ಈ ಸಮಾಜದಲ್ಲಿದ್ದಾರೆ. ಇಂತಹ ನಾಟಕಗಳ ಮೂಲಕ ನಮ್ಮ ಸಂಸ್ಕೃತಿಯು ಬೆಳೆಯುತ್ತದೆ. ಒಂದೊಂದು ನಾಟಕಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತದೆ ಎಂದರು.

ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಮತ್ತು ಖ್ಯಾತ ರಂಗಕರ್ಮಿ ನಾಗೇಶ್ ಕುಮಾರ್ ಉದ್ಯಾವರ ಮಾತನಾಡಿ, ರಂಗಭೂಮಿಯ ನಾಟಕಗಳು ಬಹಳಷ್ಟು ವರ್ಷದಿಂದ ಆರಂಭವಾಗಿದೆಯಾದರೂ, ಕೆಲವು ವರ್ಷಗಳ ಹಿಂದೆ ಈ ನಾಟಕಗಳು ಸ್ಥಗಿತವನ್ನು ಕಂಡಿದ್ದವು. ಆದರೆ ಪ್ರಸ್ತುತ ನಿರಂತರ್ ಸಂಘಟನೆಗಳ ಮೂಲಕ ಇಂತಹ ನಾಟಕಗಳು ನಿರಂತರವಾಗಿ ಸಾಗುತ್ತಿವೆ. ಗದ್ದೆಯಲ್ಲಿ ನಡೆಯುತ್ತಿದ್ದ ತುಳು ನಾಟಕಗಳು, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಪ್ರತಿಯೊಂದು ನಾಟಕಗಳು ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮೂಡುಬಳ್ಳೆ ಚಾರಿಟೇಬಲ್ ಟ್ರಸ್ಟ್ ಟ್ರಸ್ಟ್ ನ ಮುಖ್ಯಸ್ಥ ಮತ್ತು ಉದ್ಯಮಿ ವಲೇರಿಯನ್ ಆಳ್ವ, ಎಚ್’ಪಿಆರ್ ಗ್ರೂಪ್ ಕಂಪೆನಿಯ ಪ್ರವರ್ತಕ ಹರಿಪ್ರಸಾದ್ ರೈ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಲತಿ ಸಂದೀಪ್, ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿತ್ರೋಡಿ, ನಾಟಕೋತ್ಸವದ ಸಂಚಾಲಕ ರೊನಾಲ್ಡ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ಟೋ ಸ್ವಾಗತಿಸಿದರೆ, ಕಾರ್ಯದರ್ಶಿ ಒಲಿವೀರ ಮತಯಸ್ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.