Home Crime ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿಗೆ 2 ವರ್ಷ 6 ತಿಂಗಳ ಜೈಲು...

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿಗೆ 2 ವರ್ಷ 6 ತಿಂಗಳ ಜೈಲು ಶಿಕ್ಷೆ…!!

ಬಂಟ್ವಾಳ : ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರು ವಿಶೇಷ ತ್ವರಿತ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಎರಡು ವರ್ಷ ಆರು ತಿಂಗಳ ಜೈಲು ಶಿಕ್ಷೆ ಹಾಗೂ 40,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

2025 ರ ಜೂನ್ 23 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಪಿಎಸ್‌ಐ ಕೀರಪ್ಪ ಘಟಕಾಂಬಳೆ ಹಾಗೂ ಪಿಎಸ್‌ಐ ಕೃಷ್ಣಕಾಂತ ಪಾಟೀಲ್ ನಡೆಸಿ, ಆರೋಪಿತನಾದ ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ವಿರುದ್ಧ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಜೆ.ಎಸ್. ಅವರು 2026ರ ಜುಲೈ 31ರಂದು ತೀರ್ಪು ಪ್ರಕಟಿಸಿ, ಆರೋಪಿಗೆ ವಿವಿಧ ಅಪರಾಧಗಳಿಗೆ ವಿಧಿಸಲಾದ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗುವಂತೆ ಆದೇಶಿಸಿ, ಅಂತಿಮವಾಗಿ 2 ವರ್ಷ 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 40,000 ರೂಪಾಯಿ ದಂಡ ವಿಧಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.