ಪುತ್ತೂರು: ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ತಕ್ಷಿತ್ (20) ಅವರ ಮೃತದೇಹ ಬೆಂಗಳೂರಿನ ವಸತಿಗೃಹದಲ್ಲಿ ಪತ್ತೆಯಾಗಿದ್ದು ಸಾವಿನ ಬಗ್ಗೆ ಅನುಮಾನ ಮೂಡಿದೆ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೂಲದವರಾದ ಅವರು ಸೇಡಿಯಾಪಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗಿನಿಂದ ತಕ್ಷಿತ್ ತಂದೆ ಪ್ರಸಾದ್ ಅವರು ಮಗನ ಮೊಬೈಲ್‌ಗೆ ಕರೆ ಮಾಡುತ್ತಿದ್ದರೂ ಆತ ಕರೆ ಸ್ವೀಕರಿಸಿರಲಿಲ್ಲ.
ಸಂಜೆ ವೇಳೆಗೆ ಮಡಿವಾಳ ಪೊಲೀಸರು ಕರೆ ಮಾಡಿ ತಕ್ಷಿತ್ ವಸತಿಗೃಹದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಮಾಹಿತಿ ನೀಡಿದರು.
ತಕ್ಷಿತ್ ಕುಟುಂಬ ಹಲವು ವರ್ಷಗಳ ಕಾಲ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ತಮಿಳು ಕಾಲನಿಯಲ್ಲಿ ವಾಸಿಸುತ್ತಿತ್ತು. ಬಳಿಕ ಅಲ್ಲಿಂದ ಸೇಡಿಯಾಪಿನ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು
ತಕ್ಷಿತ್ ಕೊಠಡಿ ಪಡೆಯಲು ನೀಡಿದ್ದ ಆಧಾರ್ ಕಾರ್ಡಿನಲ್ಲಿ ಕೌಡಿಚ್ಚಾರಿನ ವಿಳಾಸವಿದ್ದ ಕಾರಣ ಆರಂಭದಲ್ಲಿ ಮಡಿವಾಳ ಪೊಲೀಸರು ಆ ವಿಳಾಸವನ್ನು ಸಂಪರ್ಕಿಸಿದ್ದರು. ಅಲ್ಲಿ ಅವರ ಸಂಬಂಧಿಕರು ಪೂರಕ ಮಾಹಿತಿ ನೀಡಿದ್ದರು.
ತಕ್ಷಿತ್ ಅವರು ಸೇಡಿಯಾಪಿನಲ್ಲಿ ತನ್ನ ತಂದೆ ತಾಯಿ ಮತ್ತು ಅಕ್ಕನೊಂದಿಗೆ ವಾಸವಾಗಿದ್ದರು. ಅಕ್ಕನಿಗೆ ವಿವಾಹವಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ತಮಿಳುನಾಡಿನಲ್ಲೇ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.



