ಕಡಬ: ಸಂಚಾರಕ್ಕೆ ಅಯೋಗ್ಯವಾಗಿರುವ ಮಡ್ಯಡ್ಕ-ಚಾಕೋಟೆ ಹಾಗೂ ಕೋಡಿಂಬಾಳ-ನಾಕೂರುಗಯ ರಸ್ತೆಗಳ ತುರ್ತು ದುರಸ್ತಿಗೆ ಆಗ್ರಹಿಸಿ ಸೌಭಾಗ್ಯ ಮಹಿಳಾ ಮಹಾಸಂಘದ ಸದಸ್ಯರು ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜುಬಿನ್ ಹಾಗೂ ಮುಖ್ಯಾಧಿಕಾರಿ ಲೀಲಾವತಿಗೆ ಮನವಿ ಸಲ್ಲಿಸಿದರು.
ಕಳೆದ ಹಲವು ತಿಂಗಳಿಂದ ಈ ಮಾರ್ಗಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಶಾಲಾ ಮಕ್ಕಳು, ವೃದ್ಧರು, ರೋಗಿಗಳವರೆಗೆ ದಿನನಿತ್ಯದ ಸಂಚಾರ ಕಷ್ಟಕರವಾಗಿದೆ. ತೀವ್ರ ಅನಾಗತ್ಯವನ್ನು ಎದುರಿಸುತ್ತಿರುವ ಜನತೆಗೆ ತಕ್ಷಣದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಸ್ತೆಗಳ ದುರಸ್ತಿಯ ಅಗತ್ಯವಿದೆ ಎಂಬುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಮಹಿಳಾ ಮಹಾಸಂಘದ ಅಧ್ಯಕ್ಷೆ ರೂಪಶ್ರೀ, ಕಾರ್ಯದರ್ಶಿ ಪ್ರಿಯಾ ಹಾಗೂ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.
ಜನಪರ ಶ್ರದ್ಧೆಯಿಂದ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಅಧ್ಯಕ್ಷೆ ತಮನ್ನಾ ಜುಬಿನ್ ಹಾಗೂ ಮುಖ್ಯಾಧಿಕಾರಿ ಲೀಲಾವತಿ ಅವರು ನೀಡಿದರು.



