ಸಾಮಾಜಿಕ ಜಾಲತಾಣಗಳಲ್ಲಿ ಅನಿತಾ ಕಾಸರಗೋಡು ಅವರು ಬಿಲ್ಲವ (ಪೂಜಾರಿ) ಸಮಾಜದ ಕುರಿತು ಅವಹೇಳನಕಾರಿ ಹಾಗೂ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆಗಳನ್ನು ನೀಡಿರುವುದನ್ನು ಬಿಲ್ಲವ ಸಮಾಜ ಸೇವಾ ಸಂಘ (ರಿ.), ಬ್ರಹ್ಮಾವರ ತೀವ್ರವಾಗಿ ಖಂಡಿಸಿದೆ.
ಇಂತಹ ಹೇಳಿಕೆಗಳು ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ಸಮಾಜದಲ್ಲಿ ವೈಮನಸ್ಸು, ಅಶಾಂತಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಪ್ರಯತ್ನವಾಗಿವೆ ಎಂದು ಸಂಘ ಆರೋಪಿಸಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಗೆ ಸಂಘದ ವತಿಯಿಂದ ಅಧಿಕೃತ ದೂರು ಸಲ್ಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅನ್ವಯ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಲ್ಲವ ಸಮಾಜ ಸೇವಾ ಸಂಘ (ರಿ.), ಬ್ರಹ್ಮಾವರದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ.ಬಿ., ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವ ಕಾಪಾಡುವ ನಿಟ್ಟಿನಲ್ಲಿ ಇಂತಹ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಕಾನೂನುಬದ್ಧ ಕ್ರಮ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.




