ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಲ್ಲಾಡಿ ಗ್ರಾಮ, ಬ್ರಹ್ಮಾವರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಿಲ್ಲಾಡಿ ಗ್ರಾಮದ ಗಣೇಶ (41) ಎಂದು ಗುರುತಿಸಲಾಗಿದೆ. ಇವರು ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದು, ಕಳೆದ 2 ವರ್ಷಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ ಎನ್ನಲಾಗಿದೆ.
ಅ.16 ರಂದು ಮಧ್ಯಾಹ್ನ 2 ಗಂಟೆಯಿಂದ ಗಣೇಶ ಕಾಣಿಸುತ್ತಿಲ್ಲ ಎಂದು ತಾಯಿ ರತ್ನ ಅವರು ಸಂಬಂಧಿ ದಿನೇಶ ಮಡಿವಾಳ (40) ಅವರಿಗೆ ತಿಳಿಸಿದ್ದಾರೆ. ಇಬ್ಬರೂ ಹುಡುಕುತ್ತಾ ಹೋದಾಗ ಮನೆಯ ಎದುರು ಇರುವ ಹಾಡಿಯ ದೂಪದ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 43/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



