Home Karavali Karnataka ಶಿರ್ವ : ರಸ್ತೆ ಗುಂಡಿ ಮುಚ್ಚಿ ವಿನೂತನ ಪ್ರತಿಭಟನೆ….!!

ಶಿರ್ವ : ರಸ್ತೆ ಗುಂಡಿ ಮುಚ್ಚಿ ವಿನೂತನ ಪ್ರತಿಭಟನೆ….!!

ಉಡುಪಿ: ಕೆಲವು ದಿನಗಳ ಹಿಂದೆಯಷ್ಟೇ ಪೆರ್ನಾಲ್-ಪಿಲಾರುಕಾನದ ಪರಿಸರದ ಸಮಾನ ಮನಸ್ಕ ನಾಗರಿಕರು ಆತ್ರಾಡಿ-ಶಿರ್ವಾ-ಬಜ್ಪೆ ರಾಜ್ಯ ಹೆದ್ದಾರಿಯ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ, ರಸ್ತೆ ದುರಸ್ತಿ ಕಾರ್ಯಕ್ಕೆ ಕೈ ಹಾಕದ್ದನ್ನು ಖಂಡಿಸಿ ಸೆ.29 ರಂದು ಇನ್ನೊಮ್ಮೆ ಒಂದುಗೂಡಿ, ತಾವೇ ಸ್ವತಹಾ ರಸ್ತೆ ರಿಪೇರಿ ಮಾಡುವುದರ ಮೂಲಕ ವಿನೂತನವಾಗಿ ಪತಿಭಟಿಸಿದ್ದಾರೆ.

ಶಿಕ್ಷಕ ಡಾ| ಮೆಲ್ವಿನ್ ಕ್ಯಾಸ್ತಲಿನೊ ಪೆರ್ನಾಲ್ ಮಾತನಾಡಿ, ‘ಜನರೇ ಎದ್ದು ಪ್ರತಿಭಟನೆ ನಡೆಸಿದ ಒಂದು ದಿನದ ನಂತರ, ಪ್ರತಿಭಟನೆ ನಡೆಸಿದ ಜಾಗದಲ್ಲಿದ್ದ ಗುಂಡಿಗಳನ್ನು ಮಾತ್ರ ಜೆಸಿಬಿ ತಂದು ಸಮತಟ್ಟು ಮಾಡಿದ್ದು ಬಿಟ್ಟರೆ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ದೀರ್ಘ ಮೌನಕ್ಕೆ ಮೊರೆ ಹೋಗಿದ್ದು ಜಂತ್ರ ಗುಂಡುಪಾದೆಯಿಂದ ಪಂಜಿಮಾರ್‌ವರೆಗೆ ರಸ್ತೆ ತೀರಾ ಹದಗೆಟ್ಟಿದು, ಸಂಚಾರಕ್ಕೆ ಆಯೋಗ್ಯವಾಗಿದೆ. ದಿನಾಲೂ ಹತ್ತಾರು ಜನ ಸವಾರರು ಹೊಂಡಗಳಲ್ಲಿ ಬಿದ್ದು ಎದ್ದು ಸಂಕಷ್ಟ ಅನುಭವಿಸುತ್ತಿದ್ದಾರೆ. ನೋವುಂಡವರ ಶಾಪ ಖಂಡಿತ ಇವರಿಗೆ ತಟ್ಟುತ್ತದೆ. ನಮ್ಮ ಹೋರಾಟ ಒಂದು ಆರಂಭ ಅಷ್ಟೇ ಸಂಬಂಧಪಟ್ಟವರು ಇನ್ನೂ ಸಹಾ ಕಾರ್ಯಪ್ರವತ್ತರಾಗದಿದ್ದಲ್ಲಿ ಜನರು ದಂಗೆ ಏಳುವುದರಲ್ಲಿ ಯಾವುದೇ ಸಂಶಯವಿಲ್ಲ’ ಅಂದರು.

ಡಿಜೆ ಸುಜಯ್ ಪೆರ್ನಲ್ ಮಾತನಾಡಿ, ‘ಮತ ಕೇಳಲು ಬರುವ ಜನಪ್ರತಿನಿಧಿಗಳು ಈಗ ಯಾಕೇ ಬರುವುದಿಲ್ಲ? ನಿಮ್ಮಿಂದ ಈ ರಸ್ತೆಯನ್ನು ದುರಸ್ತಿಗೊಳಿಸಲು ಆಗದಿದ್ದರೆ ನಮಗೆ ಲಿಖಿತ ರೂಪದಲ್ಲಿ ಕೂಡಿ. ನಾವು ಇವತ್ತು ಸಾಂಕೇತಿಕವಾಗಿ ಜನರಿಂದ ಚಂದಾ ಎತ್ತಿ, ಸಿಮೆಂಟ್-ಮರಳು ತಂದು; ರೆಡಿ-ಮಿಕ್ಸ್ ಇಲ್ಲಿ ತಯಾರಿಸಿ ಒಂದೆರಡು ಗುಂಡಿಗಳನ್ನು ಮುಚ್ಚಿದೆವೆ. ಮುಂದಿನ ದಿನಗಳಲ್ಲಿ ನಿಮ್ಮಿಂದ ಆಗದಿದ್ದರೆ, ನಾವೇ ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತೇವೆ’ ಎಂದು ಎಚ್ಚರಿಸಿದರು. ಸ್ಥಳೀಯ ಸ್ತ್ರೀ ಸಂಘಟನೆಯವರು ಸಹಾ ತಮ್ಮ ಸಹಕಾರ ನೀಡಿದ್ದು ಒಜ್ಜಾಲ್ಡ್ ಲೋಬೊ, ವಿಲ್ಫ್ಡ್ ಕ್ಯಾಸ್ತೆಲಿ, ವ್ಯಾಲೆಂಟಿಯ್ಸ್ ಡಿಸೋಜಾ, ಲಾರೆನ್ಸ್ ಕೊರೆಯಾ, ಸಂದೀಪ್ ಮೆಂಡೊನ್ಸಾ, ಶ್ರೀ ಎಲಿಯಾಸ್ ಡಿಸೋಜಾ, ಅಶೋಕ್ ಲೋಬೊ, ಪ್ರಕಾಶ್ ಮಥಾಯಸ್, ಸಿಂಧಿಯಾ ಮೊದಲಾದವರು ಉಪಸ್ಥಿತರಿದ್ದರು.