ಚಿಕ್ಕಮಗಳೂರು : ಕರ್ನಾಟಕದ ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ತೆಲಂಗಾಣ ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್ ಎಂಬವರನ್ನು ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ.
ಆರೋಪಿಗಳು Www.Devaseva.com ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದಿದ್ದು, ಅದರ ಮೂಲಕ ದೇಶದ ಮತ್ತು ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಸಿ ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ಹಣ ಪಡೆದು ಭಕ್ತರನ್ನು ವಂಚಿಸುತ್ತಿದ್ದರು.
ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಉಪವ್ಯವಸ್ಥಾಪಕ ರಾಘವೇಂದ್ರ ಅವರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಭಕ್ತರು ವಿಶೇಷ ಪೂಜೆ, ಪ್ರಸಾದ ಅಥವಾ ಸೇವೆಗಾಗಿ ಆನ್‌ಲೈನ್ ಮೂಲಕ ಹಣ ಪಾವತಿ ಮಾಡುವ ಮೊದಲು ದೇವಾಲಯಗಳ ಅಧಿಕೃತ ವೆಬ್‌ಸೈಟ್ ಅಥವಾ ದೇವಾಲಯ ನಿರ್ವಹಣಾ ಮಂಡಳಿಯನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪರಿಶೀಲಿಸುವುದು ಉತ್ತಮ. ಯಾವುದೇ ಸಂಶಯಾಸ್ಪದ ವೆಬ್‌ಸೈಟ್ ಅಥವಾ ವಂಚನೆ ಪ್ರಯತ್ನ ಕಂಡುಬAದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಂ ಪೋರ್ಟಲ್‌ಗೆ (www.cybercrime.gov.in) ದೂರು ನೀಡಿ ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.