ಶಿವಮೊಗ್ಗ : ವಿವಿಧೆಡೆ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ತೀರ್ಥಹಳ್ಳಿ ಪಟ್ಟಣದ ಕಾಲೇಜ್ ನೌಕರನೋರ್ವನನ್ನು, ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಸಂಭವಿಸಿದೆ.
ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಣಾವರ ಹೋಬಳಿ ಬೇವಿನಹಳ್ಳಿ ಗ್ರಾಮದ ನಿವಾಸಿಯಾದ, ಪ್ರಸ್ತುತ ಶಿವಮೊಗ್ಗದ ರವೀಂದ್ರನಗರ ೬ ನೇ ಕ್ರಾಸ್ ನಲ್ಲಿ ನೆಲೆಸಿರುವ ಹರೀಶ್ ಬಿ (೩೯) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ತೀರ್ಥಹಳ್ಳಿ ತುಂಗಾ ಕಾಲೇಜ್ ನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯಿಂದ ೭೧ ಗ್ರಾಂ ತೂಕದ ೩ ಬಂಗಾರದ ಸರ ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ ೭. ೧೦ ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಹಾಗೆಯೇ ಕೃತ್ಯಕ್ಕೆ ಬಳಸಿದ್ದ ಸ್ಪ್ಲೆಂಡರ್ ಬೈಕ್ ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಜಯನಗರ ಠಾಣೆ ಇನ್ಸ್’ಪೆಕ್ಟರ್ ಹೆಚ್ ಎಂ ಸಿದ್ದೇಗೌಡ, ಸಬ್ ಇನ್ಸ್’ಪೆಕ್ಟರ್ ಕೋಮಲ ಬಿ ಎಆರ್, ಎಎಸ್‌ಐ ಕರಿಬಸಪ್ಪ ಸಿ ಆರ್, ಸಿಬ್ಬಂದಿಗಳಾದ ನಾಗರಾಜ್ ಕೆ, ವಸಂತ ಜಿ, ಸಚಿನ್ ಎಚ್ ಎಸ್, ವೀರೇಶ್ ಬಿ ಎಂ ರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಸಿಕ್ಕಿಬಿದ್ದ ಆರೋಪಿ : ೧೧/೯/೨೦೨೫ ರಂದು ಬೆಳಿಗ್ಗೆ ರವೀಂದ್ರ ನಗರದ ರೈಲ್ವೆ ಟ್ರ್ಯಾಕ್ ಬಳಿ ವಾಯು ವಿಹಾರಕ್ಕೆ ತೆರಳಿದ್ದ ವೃದ್ದೆಯೋರ್ವರ ೨೫ ಗ್ರಾಂ ತೂಕದ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿ ಅಪಹರಿಸಿ ಪರಾರಿಯಾಗಿದ್ದ. ಈ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದ ತನಿಖೆ ವೇಳೆ ಆರೋಪಿ ಹರೀಶ್ ಬಿ ಕೃತ್ಯದಲ್ಲಿ ಭಾಗಿಯಾಗಿದ್ದು ಪೊಲೀಸರಿಗೆ ಕಂಡುಬಂದಿತ್ತು. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಇತರೆ ೨ ಸರಗಳ್ಳತನ ಕೃತ್ಯಗಳಲ್ಲಿ ಆರೋಪಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.