ಕೋಟ: ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದ ಕಾಣ್ಕೇರಿ ಪ್ರದೇಶದಲ್ಲಿ ಅಡಿಕೆ ಮರ ಹತ್ತುವ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕನೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಕಾಣ್ಕೇರಿ ಗುಂಡ್ಮಿ ಗ್ರಾಮದ ಗಣೇಶ ನಿಲಯ ನಿವಾಸಿ ಶ್ರೀನಿವಾಸ ಪೂಜಾರಿ (72) ಎಂದು ಗುರುತಿಸಲಾಗಿದೆ.
ಇವರು ತೆಂಗಿನ ಹಾಗೂ ಅಡಿಕೆ ಮರ ಹತ್ತಿ ಕಾಯಿ ಮತ್ತು ಅಡಿಕೆ ಕೊಯ್ಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಫೆಬ್ರವರಿ 2ರಂದು ಬೆಳಿಗ್ಗೆ ಪದ್ಮನಾಭ ಹೊಳ್ಳ ಅವರ ಅಡಿಕೆ ತೋಟದಲ್ಲಿ ಅಡಿಕೆ ಮರ ಹತ್ತುತ್ತಿದ್ದ ವೇಳೆ ಮರ ತುಂಡಾಗಿ ಮುರಿದು ಬಿದ್ದು ಶ್ರೀನಿವಾಸ ಪೂಜಾರಿ ಗಂಭೀರವಾಗಿ ಗಾಯಗೊಂಡರು.
ತಕ್ಷಣ ಅವರನ್ನು ಕೋಟ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರಿಶೀಲಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.



