Home Crime ವಿಟ್ಲ ಸಮೀಪ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ : ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ…!!

ವಿಟ್ಲ ಸಮೀಪ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ : ಓರ್ವ ವ್ಯಕ್ತಿ ಪೊಲೀಸ್ ವಶಕ್ಕೆ…!!

ಬಂಟ್ವಾಳ : ದಕ್ಷಿಣ ಕನ್ನಡ ಜೊತೆಗೆ ಬಂಟ್ವಾಳ ಸಮೀಪದ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಸಮೀಪದ ನೂಜಿಯಲ್ಲಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಉಂಟಾದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಸ್ಥಳೀಯ ಪಿಡಿಒ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ತಿಳಿಸಿದ್ದಾರೆ. ಬಂಧಿತನನ್ನು ಅಬ್ದುಲ್‌ ಗಫೂರ್ ಎಂದು ಗುರುತಿಸಲಾಗಿದೆ.

ಕಂಬಳಬೆಟ್ಟು ನೂಜಿ ಎಂಬಲ್ಲಿ ಸುಡುಮದ್ದು ಸ್ಫೋಟಗೊಂಡಿರುವ ಬಗ್ಗೆ ಮಾಹಿತಿ ಹಿನ್ನೆಲೆ ಪಿಡಿಒ ಮತ್ತು ಕಂದಾಯ ನಿರೀಕ್ಷಕರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಸ್ಥಳೀಯ ನಿವಾಸಿಯಾದ ಆರೋಪಿ ಅಬ್ದುಲ್ ಗಫೂರ್ ಎಂಬಾತ ಅಕ್ರಮವಾಗಿ ಶೆಡ್ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು ತಯಾರಿಸಿ, ಅಕ್ರಮವಾಗಿ ಸಂಗ್ರಹಿಸಿದ್ದ. ಈ ಸುಡುಮದ್ದುಗಳು ಸ್ಪೋಟಗೊಂಡಿದೆ.

ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮರಗಳು ಸುಟ್ಟು ಹೋಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿತ ಅಬ್ದುಲ್ ಗಫೂರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.