Home Crime ಮದುವೆಯಾದ 10 ದಿನಕ್ಕೇ ಸರಗಳ್ಳತನ: ಸಿನಿಮೀಯ ಶೈಲಿಯಲ್ಲಿ ನವವಿವಾಹಿತನ ಬಂಧನ”

ಮದುವೆಯಾದ 10 ದಿನಕ್ಕೇ ಸರಗಳ್ಳತನ: ಸಿನಿಮೀಯ ಶೈಲಿಯಲ್ಲಿ ನವವಿವಾಹಿತನ ಬಂಧನ”

​ಶಿವಮೊಗ್ಗ: ಮದುವೆಯಾಗಿ ಕೇವಲ ಹತ್ತು ದಿನಗಳೂ ಕಳೆಯುವ ಮುನ್ನವೇ ಶೋಕಿ ಜೀವನದ ವ್ಯಾಮೋಹಕ್ಕೆ ಬಿದ್ದು ಸರಗಳ್ಳತನಕ್ಕಿಳಿದಿದ್ದ ನವವಿವಾಹಿತನೊಬ್ಬನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಮದುವೆಯ ಅಲಂಕಾರ ಇನ್ನೂ ಮಾಸದ ಕಾರಿನಲ್ಲೇ ಬಂದು ಈತ ಕಳ್ಳತನ ಎಸಗುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ.​

ಘಟನೆಯ ಹಿನ್ನೆಲೆ:​ ಮೇ 23ರಂದು ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದ ಬಳಿ ಪ್ರೇಮಿಗಳಿಬ್ಬರು ಕಾರು ನಿಲ್ಲಿಸಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ತನ್ನ ಕಾರಿನಲ್ಲಿ ಬಂದ ಆರೋಪಿ ಮಂಜುನಾಥ್, ಯುವತಿಯ ಕೊರಳಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಈ ಹಠಾತ್ ದಾಳಿಯಿಂದ ಆಘಾತಕ್ಕೊಳಗಾಗಿದ್ದರೂ ಸಹ, ಪ್ರೇಮಿಗಳು ಆರೋಪಿ ಪಲಾಯನಗೈದ ಕಾರಿನ ನಂಬರ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದರು.​ಪ್ರೇಮಿಗಳೇ ಈತನ ಮೊದಲ ಟಾರ್ಗೆಟ್:​ ಪೊಲೀಸ್ ವಿಚಾರಣೆಯ ವೇಳೆ ಆರೋಪಿಯ ಹಳೇ ಇತಿಹಾಸ ಬಯಲಾಗಿದೆ. ಈ ಮಂಜುನಾಥ್ ನಿರಂತರವಾಗಿ ಐಷಾರಾಮಿ ಜೀವನ ನಡೆಸುವ ಹಂಬಲ ಹೊಂದಿದ್ದ. ಇದೇ ಕಾರಣಕ್ಕಾಗಿ ಈ ಹಿಂದೆ ಕೂಡ ಏಕಾಂತದಲ್ಲಿದ್ದ ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣ ದೋಚುತ್ತಿದ್ದ ಎನ್ನಲಾಗಿದೆ. ಆದರೆ, ಹಿಂದಿನ ಘಟನೆಗಳಲ್ಲಿ ಯಾರು ದೂರು ನೀಡದ ಕಾರಣ ಈತ ಪಾರಾಗಿದ್ದ. ಸದ್ಯ ಪತ್ನಿಯೊಂದಿಗೆ ಹೊಸ ಜೀವನ ಆರಂಭಿಸಬೇಕಾಗಿದ್ದ ನವವಿವಾಹಿತ, ತನ್ನದೇ ದುರ್ಬುದ್ಧಿಯಿಂದಾಗಿ ಈಗ ಜೈಲು ಕಂಬಿ ಎಣಿಸುವಂತಾಗಿದೆ.