ಬೆಂಗಳೂರು: ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ್ದ ಪ್ರಕರಣ ಸಂಬಂಧ ಮೇಸ್ತ್ರಿ ಸಹಿತ ಮೂವರು ಆರೋಪಿಗಳನ್ನು ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಗುರುಪ್ರಸಾದ್, ಅರ್ಬಾಜ್ ಹಾಗೂ ಜಿಬ್ರಾನ್ ಎಂದು ತಿಳಿದು ಬಂದಿದೆ.
ಚಿಕ್ಕಜಾಲದ ಹುಣಸಮಾರನಹಳ್ಳಿಯಲ್ಲಿರುವ ಕೃಷ್ಣಾಚಾರಿ ಎಂಬವರ ಮನೆಗೆ ಎ.18ರಂದು ರಾತ್ರಿ ನುಗ್ಗಿದ್ದ ಅರ್ಬಾಜ್ ಹಾಗೂ ಜಿಬ್ರಾನ್, ಮನೆಯವರಿಗೆ ಚಾಕು ತೋರಿಸಿ 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ ಹಾಗೂ 12 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃಷ್ಣಾಚಾರಿ ಅವರ ಪುತ್ರ ಸುದರ್ಶನ್ ಹಾಗೂ ಆರೋಪಿ ಗುರುಪ್ರಸಾದ್ ಗೆಳೆಯರಾಗಿದ್ದರು. ತಂದೆ ಹೊಸದಾಗಿ ಕಟ್ಟಿಸುತ್ತಿದ್ದ ಮನೆಯ ಕಾಮಗಾರಿ ಕೆಲಸವನ್ನು ಸುದರ್ಶನ್ ತನ್ನ ಸ್ನೇಹಿತ ಗುರುಪ್ರಸಾದ್‌ಗೆ ಕೊಡಿಸಿದ್ದ. ಸ್ನೇಹಿತನ ಮನೆಯೆಂದು ಕಡಿಮೆ ಹಣಕ್ಕೆ ಒಪ್ಪಿಕೊಂಡಿದ್ದ ಗುರುಪ್ರಸಾದ್ ಕೆಲಸ ಮಾಡಿಸುತ್ತಿದ್ದ. ಆದರೆ, ಮನೆ ನಿರ್ಮಾಣದ ಸ್ಥಳದ ಬಳಿ ಬರುತ್ತಿದ್ದ ಸುದರ್ಶನ್ ಹಾಗೂ ಅವರ ತಂದೆ ಕಾಮಗಾರಿ ಕೆಲಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅಲ್ಲದೇ, ಪೂರ್ತಿ ಹಣ ಕೊಡುವುದಿಲ್ಲ ಎಂದು ಜಗಳ ಮಾಡಲಾರಂಭಿಸಿದ್ದರು. ಇದರಿಂದಾಗಿ ಬೇಸತ್ತಿದ್ದ ಗುರುಪ್ರಸಾದ್, ಸ್ನೇಹಿತನ ಮನೆಯಲ್ಲಿ ದರೋಡೆ ಮಾಡುವ ಸಂಚು ರೂಪಿಸಿದ್ದ. ಅದಕ್ಕಾಗಿಯೇ ತನ್ನ ಬಳಿ ಕೆಲಸ ಮಾಡುತ್ತಿದ್ದ ಅರ್ಬಾಜ್ ಹಾಗೂ ಜಿಬ್ರಾನ್‌ಗೆ ತರಬೇತಿ ನೀಡಿ ಎ.18ರಂದು ರಾತ್ರಿ ಕೃಷ್ಣಾಚಾರಿ ಅವರ ಮನೆಗೆ ನುಗ್ಗಿಸಿದ್ದ. ಚಾಕು ತೋರಿಸಿ ಮನೆಯವರನ್ನು ಬೆದರಿಸಿದ್ದ ಆರೋಪಿಗಳು ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದರೋಡೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಎರಡು ತಿಂಗಳು ನಿರಂತರ ಹುಡುಕಾಟ ನಡೆಸಿದ್ದ ಚಿಕ್ಕಜಾಲ ಪೊಲೀಸರು ಸದ್ಯ ಮೂವರನ್ನೂ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 12 ಲಕ್ಷ ರೂ. ನಗದು, 24 ಲಕ್ಷ ರೂ. ಮೌಲ್ಯದ ಆಭರಣಗಳು, 1 ದ್ವಿಚಕ್ರ ವಾಹನ, 1 ಕಾರು ಹಾಗೂ 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.




