ಬ್ರಹ್ಮಾವರ: ಕೆಂಜೂರು ಗ್ರಾಮದ ಪಾದೆಮಠದಲ್ಲಿರುವ ವೀರಭದ್ರ ದೇವಸ್ಥಾನದ ಸಮೀಪ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ದಿನಾಂಕ 20 ಮೇ 2026 ರಂದು ಪೇತ್ರಿ ಭಾಗದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಮುಕ್ತಾ ಬಾಯಿ ಅವರಿಗೆ, ಕೆಲವು ಮಂದಿ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಹಿಂಸಾತ್ಮಕವಾಗಿ ಕಾದಾಡಿಸಿ, ಹಣವನ್ನು ಪಣವಾಗಿ ಇಟ್ಟು ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಸ್ಥಳದಲ್ಲಿದ್ದ ಹಲವರು ಓಡಿ ಚದರಿಕೊಂಡಿದ್ದು, ಪೊಲೀಸರು ಸುತ್ತುವರಿದು ಸಂತೋಷ್ ಶೆಟ್ಟಿ, ರಜತ್ ಪೂಜಾರಿ, ಸುಕೇಶ್ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿ ಎಂಬ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಕೋಳಿ ಅಂಕಕ್ಕೆ ಬಳಸಲಾಗಿದ್ದ 2,120 ರೂಪಾಯಿ ನಗದು, ಕಾದಾಡುತ್ತಿದ್ದ ಎರಡು ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ್ದ ಕತ್ತಿಗಳು (ಬಾಳ್) ಹಾಗೂ ಹಗ್ಗದ ತುಂಡುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 93/2026ರಡಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93 ಹಾಗೂ ಪ್ರಿವೆನ್ಷನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಕಾಯ್ದೆಯ ಕಲಂ 11ರಂತೆ ಪ್ರಕರಣ ದಾಖಲಾಗಿದೆ.





