
ಬೈಂದೂರು: ಉಪ್ಪುಂದ ಗ್ರಾಮದ ವ್ಯಕ್ತಿಯೋರ್ವರು ತಮ್ಮ ಮನೆಯ ಅಡುಗೆ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ನಾಗರಾಜ ನಾಯಕ್ (43) ಎಂದು ಗುರುತಿಸಲಾಗಿದ್ದು, ಅವರು ವಿಪರೀತ ಮದ್ಯಪಾನ ಮಾಡುವ ಹವ್ಯಾಸ ಹೊಂದಿದ್ದರೆಂದು ತಿಳಿದುಬಂದಿದೆ. ದಿನಾಂಕ 19 ಮೇ 2026ರಂದು ರಾತ್ರಿ ಊಟ ಮಾಡಿ ಮಲಗಿದ್ದ ನಾಗರಾಜ ನಾಯಕ್, ಬಳಿಕ ರಾತ್ರಿ ವೇಳೆ ಮತ್ತೆ ಮದ್ಯ ಸೇವನೆ ಮಾಡಲು ಅಡುಗೆ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಈ ವೇಳೆ ಅಡುಗೆ ಮನೆಯಲ್ಲಿದ್ದ ಪಾತ್ರೆ ತೊಳೆಯುವ ಮೋರಿಯ ಬಳಿ ಆಕಸ್ಮಿಕವಾಗಿ ಎಡವಿ ಬಿದ್ದು, ಮೇಲೇಳಲು ಸಾಧ್ಯವಾಗದೆ ಅಲ್ಲೇ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ದಿನಾಂಕ 20 ಮೇ ಬೆಳಿಗ್ಗೆ ಸುಮಾರು 6:30 ಗಂಟೆಗೆ ಪತ್ನಿ ಸುಜಾತ ಅವರು ಅಡುಗೆ ಮನೆಗೆ ತೆರಳಿ ನೋಡಿದಾಗ ನಾಗರಾಜ ನಾಯಕ್ ಅವರು ಪ್ರತಿಕ್ರಿಯೆ ನೀಡದೆ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದರು. ಬಳಿಕ ನೆರೆಹೊರೆಯವರ ಸಹಾಯದಿಂದ ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 23/2026ರಡಿ ಕಲಂ 194 BNSS ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



