Home Latest ಅರಬ್ಬಿ ಸಮುದ್ರ ಪ್ರಕ್ಷುಬ್ಧ: ಮೇ 25ರವರೆಗೆ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

ಅರಬ್ಬಿ ಸಮುದ್ರ ಪ್ರಕ್ಷುಬ್ಧ: ಮೇ 25ರವರೆಗೆ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಭಾರಿ ಬಿರುಗಾಳಿ ಸಹಿತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಮೇ 20 ರಿಂದ ಮೇ 25 ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯದ ತುರ್ತು ಪ್ರತಿಕ್ರಿಯೆ ನಿಯಂತ್ರಣ ಕೊಠಡಿ (ಐಸಿಆರ್-ಇಆರ್) ಎಚ್ಚರಿಕೆ ನೀಡಿದೆ.

 

ಮೇ 20 ರಿಂದ ಮೇ 22 ರವರೆಗೆ, ಕರ್ನಾಟಕ ಮತ್ತು ಕೇರಳ ಕರಾವಳಿಗಳು, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ.

 

ಕೆಲವು ಸ್ಥಳಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ.ವರೆಗೆ ತೀವ್ರಗೊಳ್ಳವ ಸಾಧ್ಯತೆ ಇದೆ. ನೈರುತ್ಯ ಅರೇಬಿಯನ್ ಸಮುದ್ರದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಸೊಮಾಲಿಯಾ ಕರಾವಳಿಯಲ್ಲಿ, ಗಾಳಿಯ ವೇಗ ಗಂಟೆಗೆ 45 ರಿಂದ 55 ಕಿ.ಮೀ. ತಲುಪುವ ಸಾಧ್ಯತೆಯಿದೆ, ಗಾಳಿಯು ಗಂಟೆಗೆ 65 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಭೀತಿ ಿದೆ.

 

ಮನ್ನಾರ್ ಕೊಲ್ಲಿ, ಬಂಗಾಳಕೊಲ್ಲಿಯ ನೈರುತ್ಯ ಮತ್ತು ಆಗ್ನೇಯ ಭಾಗಗಳು ಮತ್ತು ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಶ್ರೀಲಂಕಾ ಕರಾವಳಿ ಮತ್ತು ನೈಋತ್ಯ ಬಂಗಾಳಕೊಲ್ಲಿಯ ಕೆಲವು ಭಾಗಗಳಲ್ಲಿ ಗಾಳಿಯ ತೀವ್ರತೆ ಗಂಟೆಗೆ 65 ಕಿ.ಮೀ ಮೀರಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

 

ಈಗಾಗಲೇ ಸಮುದ್ರಕ್ಕೆ ಇಳಿದಿರುವ ಮೀನುಗಾರರು ತಕ್ಷಣವೇ ಸುರಕ್ಷಿತವಾಗಿ ದಡಕ್ಕೆ ಮರಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ನೀಡುವ ಎಲ್ಲಾ ಅಧಿಕೃತ ಸಲಹೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮೀನುಗಾರರನ್ನು ಒತ್ತಾಯಿಸಿದ್ದಾರೆ.

 

ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ ದೇಶದ ಎಲ್ಲಾ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಸಂದೇಶವನ್ನು ಈಗಾಗಲೇ ರವಾನಿಸಲಾಗಿದ್ದು, ಅಧಿಕಾರಿಗಳು ಜಾಗರೂಕರಾಗಿರುವಂತೆ ಕೋರಲಾಗಿದೆ.