ಮಣಿಪಾಲ: ಶಾಂತಿನಗರ ಸಮೀಪದ ಸುದರ್ಶನ ಕಾಂಪ್ಲೆಕ್ಸ್‌ನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಗಳು ಸಿಮೆಂಟ್ ಕಲ್ಲಿನಿಂದ ಹಲ್ಲೆ ನಡೆಸಿ, ಚಿನ್ನದ ಸರ ದೋಚಿದ ಘಟನೆ ಬೆಳಕಿಗೆ ಬಂದಿದೆ.
ಕುಮಟಾ ಮೂಲದ ಮೇಘಾ ಮಂಜುನಾಥ ಗೌಡ ಅವರು ನೀಡಿದ ದೂರಿನಂತೆ, ತಾವು ತಮ್ಮ ಸ್ನೇಹಿತೆಯರಾದ ನಾಗರತ್ನ, ಗಗನಾ ಹಾಗೂ ಯೋಗಿತಾ @ ಯೋಗೀಶ್ವರಿ ಅವರೊಂದಿಗೆ ಶಾಂತಿನಗರದ ವಾಗ್ಲೇ ಸ್ಟೋರ್ ಸಮೀಪದ ಸುದರ್ಶನ ಕಾಂಪ್ಲೆಕ್ಸ್‌ನಲ್ಲಿ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದರು.
ಮೇ 12ರಂದು ಸಂಜೆ 4 ಗಂಟೆಗೆ ಮೇಘಾ, ನಾಗರತ್ನ ಮತ್ತು ಗಗನಾ ಅವರು ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಯುನಿಟ್-5 ಪ್ರೆಸ್‌ನಲ್ಲಿ ಬೈಂಡಿಂಗ್ ಕೆಲಸದ ರಾತ್ರಿ ಪಾಳಿಗೆ ತೆರಳಿದ್ದರು. ಕೆಲಸ ಮುಗಿಸಿ ಮೇ 13ರಂದು ಬೆಳಿಗ್ಗೆ 7.15ಕ್ಕೆ ರೂಮಿಗೆ ವಾಪಾಸಾದಾಗ, ಕೊಠಡಿಯ ಬಾಗಿಲು ಅರೆ ತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ.
ಬಾಗಿಲು ತಳ್ಳಿದಾಗ ಯೋಗಿತಾ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪಕ್ಕದಲ್ಲಿ ತುಂಡಾದ ಸಿಮೆಂಟ್ ಕಲ್ಲುಗಳು ಕಂಡುಬಂದಿವೆ. ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗುತ್ತಿದ್ದು, ಮಾತನಾಡದ ಸ್ಥಿತಿಯಲ್ಲಿದ್ದಳು ಎನ್ನಲಾಗಿದೆ. ಅಲ್ಲದೆ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ, ಅಂದಾಜು ₹80 ಸಾವಿರ ಮೌಲ್ಯದ ಚಿನ್ನದ ಸರ ಕಾಣೆಯಾಗಿತ್ತು.
ಗಾಯಾಳು ಯೋಗಿತಾಳನ್ನು ತಕ್ಷಣ ಆಟೋ ರಿಕ್ಷಾದಲ್ಲಿ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮೇ 12ರ ಸಂಜೆ 6 ಗಂಟೆಯಿಂದ ಮೇ 13ರ ಬೆಳಿಗ್ಗೆ 7.15ರ ನಡುವೆ ಅಪರಿಚಿತರು ಕೊಠಡಿಗೆ ನುಗ್ಗಿ ಚಿನ್ನದ ಸರ ದೋಚಿ, ಯೋಗಿತಾಳನ್ನು ಕೊಲೆ ಮಾಡುವ ಉದ್ದೇಶದಿಂದ ಸಿಮೆಂಟ್ ಕಲ್ಲಿನಿಂದ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




