ಚಿಕ್ಕಬಳ್ಳಾಪುರ: ವಿದ್ಯಾಕೇಂದ್ರವಾಗಬೇಕಿದ್ದ ಕಾಲೇಜು ಆವರಣ ಈಗ ಪುಂಡಾಟಿಕೆಯ ರಣಾಂಗಣವಾಗಿ ಮಾರ್ಪಟ್ಟಿದೆ. ನಗರದ ಹೊರವಲಯದ ಬೀಡಗಾನಹಳ್ಳಿ ಸಮೀಪವಿರುವ ನಾಗಾರ್ಜುನ ಕಾಲೇಜಿನ ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಕಾನ್ಸ್‌ಟೇಬಲ್ ಮೇಲೆ ಕಾಲೇಜು ವಿದ್ಯಾರ್ಥಿಗಳ ಗುಂಪು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ.
ಪೊಲೀಸರ ಮೇಲೆ ವಿದ್ಯಾರ್ಥಿಗಳು ಮುಗಿಬಿದ್ದಿರುವ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಂದಿಗಿರಿಧಾಮ ಪೊಲೀಸ್ ಠಾಣೆಯ ಎಎಸ್‌ಐ ಗಂಗರಾಜು ಮತ್ತು ಕಾನ್ಸ್‌ಟೇಬಲ್ ಗಂಗರಾಜು ಅವರು ಘಟನೆಯಲ್ಲಿ ಗಾಯಗೊಂಡವರು ಎಂದು ತಿಳಿದು ಬಂದಿದೆ.
ಶುಕ್ರವಾರ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಸಿನಿಮಾ ತಾರೆಯರು ಆಗಮಿಸಿದ್ದರು. ಈ ವೇಳೆ ಜನಸಂದಣಿ ಮತ್ತು ಭದ್ರತೆಯನ್ನು ನಿಯಂತ್ರಿಸಲು ಪೊಲೀಸರು ಕಾಲೇಜಿನ ಮುಖ್ಯ ಗೇಟ್ ಬಳಿ ನಿಯೋಜನೆಗೊಂಡಿದ್ದರು.ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಹತ್ತಾರು ವಿದ್ಯಾರ್ಥಿಗಳು ಸೈಲೆನ್ಸರ್‌ಗಳನ್ನು ಮಾರ್ಪಾಡು (Alter) ಮಾಡಿದ ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಪೊಲೀಸರ ಮುಂದೆಯೇ ರೇಸಿಂಗ್ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿ ಸೈಲೆಂಟ್ ಆಗಿ ಹೋಗಿ ಎಂದು ಎಎಸ್‌ಐ ಗಂಗರಾಜು ಅವರು ವಿದ್ಯಾರ್ಥಿಗಳಿಗೆ ತಿಳಿಹೇಳಿದ್ದಾರೆ.
ಪೊಲೀಸರ ಎಚ್ಚರಿಕೆಯನ್ನು ಕಿಂಚಿತ್ತೂ ಲೆಕ್ಕಿಸದ ಒಬ್ಬ ವಿದ್ಯಾರ್ಥಿ ಪೊಲೀಸ್ ಏನ್ ಮಾಡ್ತಾನೆ? ಎಂದು ಸವಾಲು ಹಾಕುತ್ತಾ ಉದ್ದೇಶಪೂರ್ವಕವಾಗಿ ಮತ್ತಷ್ಟು ಕರ್ಕಶ ಶಬ್ದ ಮಾಡಿದ್ದಾನೆ. ಪರಿಸ್ಥಿತಿ ಮಿತಿ ಮೀರಿದಾಗ ಎಎಸ್‌ಐ ಲಾಠಿ ಬೀಸಿದ್ದು, ಈ ವೇಳೆ ವಿದ್ಯಾರ್ಥಿಗೆ ಗಾಯವಾಗಿ ರಕ್ತ ಬಂದಿದೆ ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡ ಪುಂಡ ವಿದ್ಯಾರ್ಥಿಗಳ ಗುಂಪು ಏಕಾಏಕಿ ಎಎಸ್‌ಐ ಮೇಲೆ ಮುಗಿಬಿದ್ದಿದೆ. ಗಲಾಟೆ ಬಿಡಿಸಲು ಹೋದ ಕಾನ್‌ಸ್ಟೇಬಲ್‌ನನ್ನು ಅಟ್ಟಾಡಿಸಿ ನೂಕಿ ಹಲ್ಲೆ ಮಾಡಲಾಗಿದೆ.
ಪೊಲೀಸ್ ಕಾರ್ಯಾಚರಣೆ ಚುರುಕು: ಸದ್ಯ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಗಂಭೀರ ಪ್ರಕರಣ ದಾಖಲಾಗಿದೆ. ಕಾನೂನು ಪಾಲಿಸಬೇಕಾದ ವಿದ್ಯಾರ್ಥಿಗಳೇ ರಕ್ಷಕರ ಮೇಲೆ ಕೈ ಮಾಡಿರುವುದು ಇಲಾಖೆಯನ್ನು ಕೆರಳಿಸಿದೆ. ಘಟನೆಯ ನಂತರ ತಲೆಮರೆಸಿಕೊಂಡಿರುವ ವಿದ್ಯಾರ್ಥಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ವಿಡಿಯೋ ಆಧರಿಸಿ ಪ್ರತಿಯೊಬ್ಬರನ್ನೂ ಗುರುತಿಸಿ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.




