ಬ್ರಹ್ಮಾವರ ಬಸ್ ಸ್ಟ್ಯಾಂಡ್ ಸಮೀಪದ ಕೀರ್ತಿ ಹೋಟೆಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿ, ನಗದು ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇ 8ರಂದು ಸಂಜೆ ವಾರಂಬಳ್ಳಿ ಗ್ರಾಮದ ಬಸ್ ನಿಲ್ದಾಣದ ಸಮೀಪವಿರುವ ಕೀರ್ತಿ ಲಾಡ್ಜ್ ಕಟ್ಟಡದ ಬದಿಯ ಓಣಿಯಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಮಟ್ಕಾ ಆಟಕ್ಕೆ ಹಣ ಸಂಗ್ರಹಿಸುತ್ತಿರುವ ಬಗ್ಗೆ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಾಹಿತಿ ಲಭಿಸಿದ ತಕ್ಷಣ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ತೆರಳಿದಾಗ ಆರೋಪಿ ಚಂದ್ರಶೇಖರ ಎಂಬಾತ ಜನರನ್ನು ನಂಬಿಸಿ ಹಣ ಸಂಗ್ರಹಿಸುತ್ತಿರುವುದು ಖಚಿತಪಟ್ಟಿದೆ.
ಪ್ರಮುಖ ಆರೋಪಿ ಚಂದ್ರಶೇಖರನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ಜನರಿಂದ ಮಟ್ಕಾ ಹಣ ಸಂಗ್ರಹಿಸಿ ಅದರಲ್ಲಿ ಸ್ವಲ್ಪ ಪಾಲನ್ನು ಇಟ್ಟುಕೊಂಡು, ಉಳಿದ ಮೊತ್ತವನ್ನು ಮಲ್ಪೆಯ ಕಿಶೋರ್ ಎಂಬುವರಿಗೆ ನೀಡುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಆರೋಪಿಯಿಂದ ಮಟ್ಕಾ ಜುಗಾರಿಗೆ ಸಂಬಂಧಿಸಿದ ₹740 ನಗದು, ಮಟ್ಕಾ ನಂಬರ್‌ಗಳಿದ್ದ ಚೀಟಿ ಮತ್ತು ಬಾಲ್‌ಪೆನ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




