ಉಡುಪಿ: ಜನವರಿ 31: ವಂದನೀಯ ರೆವ. ಫಾ. (ಡಾ.) ಲೆಸ್ಲಿ ಕ್ಲಿಫರ್ಡ್ ಅವರ ನೇಮಕಾತಿಯನ್ನು ಜ.31ರಂದು ರೋಮ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಸಮಯ ಸಂಜೆ 4.30) ಅಧಿಕೃತವಾಗಿ ಪ್ರಕಟಿಸಲಾಯಿತು. ಇದೇ ಸಮಯದಲ್ಲಿ ಉಡುಪಿ ಜಿಲ್ಲೆಯ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿಯೂ ಈ ಘೋಷಣೆ ಮಾಡಲಾಯಿತು.
1962ರ ಆಗಸ್ಟ್ 19ರಂದು ಉಡುಪಿ ಜಿಲ್ಲೆಯ ಉಚ್ಚಿಲ (ಎರ್ಮಾಳ್) ಗ್ರಾಮದಲ್ಲಿ ಲಾರೆನ್ಸ್ ಡಿಸೋಜಾ ಮತ್ತು ಸಿಸಿಲಿಯಾ ದಂಪತಿಗಳಿಗೆ ಜನಿಸಿದ ಫಾ. ಲೆಸ್ಲಿ, ಆಳವಾದ ಕ್ರೈಸ್ತ ನಂಬಿಕೆ ಮತ್ತು ಮೌಲ್ಯಗಳ ಕುಟುಂಬದಲ್ಲಿ ಬೆಳೆದವರು. ಎಂಟು ಸಹೋದರ-ಸಹೋದರಿಯರ ಕುಟುಂಬದ ಸದಸ್ಯರಾಗಿರುವ ಅವರು, ತಮ್ಮ ಧಾರ್ಮಿಕ ಜೀವನಕ್ಕೆ ಕುಟುಂಬದ ಪ್ರೇರಣೆಯನ್ನು ಸದಾ ಸ್ಮರಿಸುತ್ತಾರೆ.
ಉಚ್ಚಿಲದ ಸರಸ್ವತಿ ಮಂದಿರ ಹೈರ್ಯ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಫಾ. ಲೆಸ್ಲಿ, ಎರ್ಮಾಳಿನ ಸರ್ಕಾರಿ ಮೀನುಗಾರಿಕಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಅದಮಾರಿನ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಪೂರ್ಣಗೊಳಿಸಿದರು.
ಯಾಜಕ ತರಬೇತಿಯೊಂದಿಗೆ ಉನ್ನತ ಶಿಕ್ಷಣ ಮುಂದುವರಿಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಹಾಗೂ ಎಂ.ಎ. (ಇಂಗ್ಲಿಷ್ ಸಾಹಿತ್ಯ) ಪದವಿಗಳನ್ನು ಪಡೆದರು. ರೋಮ್‌ನ ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದು, ಬಳಿಕ ಬೆಲ್ಜಿಯಂನ ಲುವೇನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದಿಂದ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
1990ರ ಮೇ 10ರಂದು ಮಂಗಳೂರು ಧರ್ಮಪ್ರಾಂತ್ಯಕ್ಕೆ ಯಾಜಕರಾಗಿ ಅಭಿಷೇಕಗೊಂಡ ಫಾ. ಲೆಸ್ಲಿ, ಕುಂದಾಪುರ ಮತ್ತು ಮಂಗಳೂರು ಪ್ರದೇಶಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. ಅವರು ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ನೈತಿಕ ಧರ್ಮಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಪಾಂಗ್ಲಾ/ಶಂಕರಪುರ, ಕಲ್ಯಾಣಪುರ–ಸಂತೆಕಟ್ಟೆ ಹಾಗೂ ಶಿರ್ವದ ವಿವಿಧ ದೇವಾಲಯಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿರುವ ಅವರು, ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಸ್ತುತ ಫಾ. ಲೆಸ್ಲಿ ಕ್ಲಿಫರ್ಡ್ ಅವರು ಶಿರ್ವ ವಲಯದ ಪ್ರಧಾನ ಧರ್ಮಗುರುಗಳಾಗಿ, ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ನ್ಯಾಯಮಂಡಳಿಯ ವಕೀಲ ಹಾಗೂ ಸಲಹೆಗಾರರ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.



