Home Latest ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐ ನಾಗೇಶ್‌ ಎಂ. ನಿಧನ..!!

ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐ ನಾಗೇಶ್‌ ಎಂ. ನಿಧನ..!!

ಉಡುಪಿ: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌)ಯ ಎಆರ್‌ಎಸ್‌ಐ ನಾಗೇಶ್‌ ಎಂ. ಅವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು ಇಂದು ನಿಧನ ಹೊಂದಿದರು. ಕಳೆದ ಒಂದು ವರ್ಷದಿಂದ ಅವರು ಕ್ಯಾನ್ಸರ್‌ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಮೂಲತಃ ಮಂಗಳೂರಿನ ಕಿನ್ನಿಗೋಳಿ ಸಮೀಪದ ಪದ್ಮನೂರಿನವರಾದ ನಾಗೇಶ್‌ ಎಂ. ಅವರು ಪ್ರಸ್ತುತ ಉಡುಪಿಯಲ್ಲಿ ವಾಸವಾಗಿದ್ದರು. 1996ರ ಅಕ್ಟೋಬರ್‌ 10ರಂದು ಮಂಗಳೂರಿನ ಡಿಎಆರ್‌ನಲ್ಲಿ ಸೇವೆಗೆ ನೇಮಕಗೊಂಡ ಅವರು, ಬಳಿಕ ಉಡುಪಿ ಜಿಲ್ಲೆ ರಚನೆಯಾದ ಸಂದರ್ಭದಲ್ಲಿ ಉಡುಪಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.

ಸೇವಾ ಅವಧಿಯಲ್ಲಿ ಪ್ರಾಮಾಣಿಕ ಹಾಗೂ ಕರ್ತವ್ಯನಿಷ್ಠ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಅವರು, 2016ರ ಡಿಸೆಂಬರ್‌ 17ರಂದು ಪದೋನ್ನತಿ ಹೊಂದಿ ಎಆರ್‌ಎಸ್‌ಐ ಹುದ್ದೆಗೆ ಏರಿದ್ದರು.

ಇವರ ಅಗಲಿಕೆಯಿಂದ ಪೊಲೀಸ್‌ ಇಲಾಖೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಬಂಧುಬಳಗಕ್ಕೆ ಅಪಾರ ಶೋಕ ಉಂಟಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.