ಸವಣೂರು: ದರ್ಬೆ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸವಣೂರು ಸಮೀಪದ ಕುದ್ಮಾರು ಗ್ರಾಮದ ಚಾಪಲ್ಲ ಎಂಬಲ್ಲಿ ಮಂಗಳವಾರ ಸಂಜೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಬಂಟ್ವಾಳ ತಾಲೂಕಿನ ಮಿತ್ತೂರು ಬೊಳ್ಳರಮಜಲು ನಿವಾಸಿ ಪುರಂದರ ಮೂಲ್ಯ ಎಂಬವರ ಪುತ್ರ ಯಜ್ಞೇಶ್ (21) ಹಾಗೂ ಆರ್ಲಪದವು ನೋಣಯ್ಯ ಭರಣ್ಯ ಅವರ ಪುತ್ರ ಜಗನ್ (20) ಎಂದು ತಿಳಿದು ಬಂದಿದೆ.
ನೀರಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಯಜ್ಞೇಶ್ ಮತ್ತು ಜಗನ್ ಕೆಲಸದ ನಿಮಿತ್ತ ಕಡಬ ತಾಲೂಕಿನ ಆಲಂಕಾರಿಗೆ ತೆರಳಿ ವಾಪಸಾಗುತ್ತಿದ್ದರು. ಸವಣೂರು ಕಡೆಯಿಂದ ಆಲಂಕಾರಿನಲ್ಲಿ ನಡೆಯುತ್ತಿರುವ ಕಾಮಗಾರಿಗೆ ನೀರು ಕೊಂಡೊಯ್ಯುತ್ತಿದ್ದ ಟ್ಯಾಂಕರ್, ಚಾಪಲ್ಲ ತಿರುವಿನಲ್ಲಿ ಬೈಕ್‌ಗೆ ಎದುರಾಗಿದೆ. ಸ್ಕೂಟರ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಟ್ಯಾಂಕರ್ ಚಾಲಕ ಎಡಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಬೈಕ್ ಟ್ಯಾಂಕರ್‌ನ ಚಕ್ರದಡಿಯಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.




