Home Kundapura News ಜಾಗದ ಗಡಿ ವಿವಾದ: ಕತ್ತಿಯಿಂದ ದಾಳಿ, ವ್ಯಕ್ತಿಗೆ ಗಂಭೀರ ಗಾಯ..!

ಜಾಗದ ಗಡಿ ವಿವಾದ: ಕತ್ತಿಯಿಂದ ದಾಳಿ, ವ್ಯಕ್ತಿಗೆ ಗಂಭೀರ ಗಾಯ..!

ಶಂಕರನಾರಾಯಣ: ಜಾಗದ ಗಡಿ ವಿಚಾರವಾಗಿ ಉಂಟಾದ ತಕರಾರು ಕತ್ತಿ ದಾಳಿಗೆ ತಿರುಗಿ ವ್ಯಕ್ತಿಯೋರ್ವರಿಗೆ ಗಂಭೀರ ಗಾಯವಾದ ಘಟನೆ ಬೆಳ್ವೆ ಗ್ರಾಮದಲ್ಲಿ ನಡೆದಿದೆ.

ಬೆಳ್ವೆ ಗ್ರಾಮದ ಮುರಳೀಧರ ಅಲ್ಸೆ (37) ಅವರು ಮೇ 4ರಂದು ಮಧ್ಯಾಹ್ನ ತಮ್ಮ ಜಾಗದ ಗಡಿಭಾಗದಲ್ಲಿ ಬೇಲಿಕಂಬವನ್ನು ಸರಿಪಡಿಸುತ್ತಿದ್ದ ವೇಳೆ ಆರೋಪಿಯಾದ ಪ್ರಕಾಶ ಅಲ್ಸೆ ಅಲ್ಲಿಗೆ ಬಂದು “ಈ ಜಾಗ ನನ್ನದು, ಬೇಲಿ ಹಾಕಬೇಡ” ಎಂದು ವಾಗ್ವಾದ ಆರಂಭಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಆರೋಪಿ ಕೈಯಲ್ಲಿ ತಂದಿದ್ದ ಕತ್ತಿಯನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ. ಜಾಗದ ಗಡಿ ಸಮಸ್ಯೆ ಇದ್ದರೆ ಸರ್ವೆ ಮಾಡಿಸೋಣ ಎಂದು ಮುರಳೀಧರ ಹೇಳಿದರೂ, ಪ್ರಕಾಶ ಅಲ್ಸೆ ಕೋಪಗೊಂಡು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ದಾಳಿ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಾಳಿಯಿಂದ ತಪ್ಪಿಸಿಕೊಳ್ಳಲು ಮುರಳೀಧರ ಎಡ ಕೈ ಅಡ್ಡ ಹಿಡಿದ ಪರಿಣಾಮ ಕೈಗೆ ತೀವ್ರ ಗಾಯವಾಗಿದೆ. ಇದೇ ವೇಳೆ ಅಲ್ಲಿಗೆ ಬಂದ ಪತ್ನಿ ವೈಶಾಲಿಯನ್ನು ಕಂಡ ಆರೋಪಿ ಕತ್ತಿಯನ್ನು ಬಿಸಾಡಿ ಪರಾರಿಯಾಗಿದ್ದು, ಹೋಗುವಾಗ ಮತ್ತೊಮ್ಮೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ಮುರಳೀಧರ ಅವರನ್ನು ಮೊದಲಿಗೆ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.