ಬೆಂಗಳೂರು: ರಾಜ್ಯ ಸರ್ಕಾರವು 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ವಿವಿಧ ಇಲಾಖೆಗಳ ಸುಮಾರು 56,432 ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು ಹಾಗೂ ಮಂಗಳೂರಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಪ್ರಾದೇಶಿಕ ಕಚೇರಿ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳಿಸುವುದು ಅಗತ್ಯವಾಗಿದ್ದು, ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುವುದರ ಜೊತೆಗೆ ಸರ್ಕಾರಿ ಇಲಾಖೆಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಉಲ್ಲೇಖಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಅನೇಕ ಪ್ರತಿಭಾವಂತ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದು, KPSCಯ ಎಲ್ಲಾ ಪ್ರಮುಖ ಕಾರ್ಯಗಳು ಬೆಂಗಳೂರು ಕೇಂದ್ರಿತವಾಗಿರುವುದರಿಂದ ಕರಾವಳಿ ಭಾಗದ ಅಭ್ಯರ್ಥಿಗಳಿಗೆ ಪ್ರಯಾಣ ಹಾಗೂ ಇತರ ಸೌಲಭ್ಯಗಳಲ್ಲಿ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಮಂಗಳೂರಿನಲ್ಲಿ KPSC ಪ್ರಾದೇಶಿಕ ಕಚೇರಿ ಸ್ಥಾಪಿಸಿದರೆ ಕರಾವಳಿ ಭಾಗದ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಡಿಸೆಂಬರ್ 2025ರಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕೇಳಲಾದ ಪ್ರಶ್ನೆಗೆ ಉತ್ತರವಾಗಿ, ರಾಜ್ಯದ 43 ವಿವಿಧ ಇಲಾಖೆಗಳಲ್ಲಿ ಸುಮಾರು 2,84,881 ಹುದ್ದೆಗಳು ಖಾಲಿ ಇರುವುದಾಗಿ ಮಾಹಿತಿ ಲಭ್ಯವಾಗಿತ್ತು. ಈ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಶಾಸಕರು ಆಗಲೇ ಸರ್ಕಾರದ ಗಮನ ಸೆಳೆದಿದ್ದರು.
ರಾಜ್ಯದ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಯುವಜನರಿಗೆ ಉದ್ಯೋಗಾವಕಾಶಗಳನ್ನು ವಿಸ್ತರಿಸುವಲ್ಲಿ ಈ ಕ್ರಮಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.





