ಕಾಪು : ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದ ಮೇರೆಗೆ ಕಾಪು ಉದ್ಯಮಿಯೊಬ್ಬರ ಕಛೇರಿಗೆ ಕೋರ್ಟ್ ಸಿಬ್ಬಂದಿಗಳು ದಾಳಿ ನಡೆಸಿದ ಘಟನೆ ನಡೆದಿದೆ.
ಪ್ರಕರಣ ವಿವರ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಹೆಸರಾಂತ ಗುತ್ತಿಗೆದಾರರಾದ ಶ್ರೀ ಸುರೇಶ್ ಶೆಟ್ಟಿ ರವರ ಮಾಲೀಕತ್ವದಲ್ಲಿರುವ ಶ್ರೀ ಸೀತಾಲಕ್ಷ್ಮೀ ಇನ್ಫ್ರಾ ಡೆವಲಪರ್ಸ್ ಎಂಬ ಸಂಸ್ಥೆಯ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡುವಂತೆ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ರೂ. 10,00,000/- ಗಳ ವಸೂಲಿಗಾಗಿ ಜಪ್ತಿ ವಾರೆಂಟ್ ಜಾರಿ ಮಾಡಿದ್ದು , ಸದರಿ ಆದೇಶದನ್ವಯ ಸುರೇಶ್ ಶೆಟ್ಟಿರವರ ಮಾಲೀಕತ್ವದ ಟ್ರಾಕ್ಟರ್, ಟಿಪ್ಪರ್, ಜೆಸಿಬಿ ಹಾಗೂ ಕಛೇರಿಯಲ್ಲಿರುವ ಉಪಕರಣಗಳನ್ನು ಜಪ್ತಿ ಮಾಡಲು ನ್ಯಾಯಾಲಯದ ಅಮೀನರು ದಿನಾಂಕ 18-08-2025ರಂದು ಸುರೇಶ್ ಶೆಟ್ಟಿರವರ ಕಛೇರಿಗೆ ದಾಳಿ ಮಾಡಿರುತ್ತಾರೆ,
ಆದರೆ ಕಛೇರಿಗೆ ಬೀಗ ಹಾಕಿದ್ದ ಕಾರಣ ಬೆಳಪುವಿನಲ್ಲಿರುವ ಕಾಮಗಾರಿ ಯಂತ್ರೋಪಕರಣಗಳಿರುವ ಕಾರ್ಯಾಗಾರಕ್ಕೆ ಭೇಟಿ ನೀಡಿ ಅಲ್ಲಿದ್ದ ಯಂತ್ರೋಪಕರಣಗಳನ್ನು ಜಪ್ತಿ ಮಾಡಲು ಮುಂದಾದಾಗ, ಸದರಿ ಸ್ಥಳಕ್ಕೆ ಬಂದ ಶ್ರೀ ಸುರೇಶ್ ಶೆಟ್ಟಿಯವರು ಜಪ್ತಿ ಕಾರ್ಯಕ್ಕೆ ತಡೆವೊಡ್ಡಿದರಾದರೂ, ನ್ಯಾಯಾಲಯದ ಅಮೀನರು ಅವರ ಮನಒಲಿಸಿ ಕೇವಲ ಟ್ರಾಕ್ಟರ್ ವಾಹನವನ್ನು ಮಾತ್ರ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ.
ಕಾಪು ತಾಲ್ಲೂಕಿನ ಎರ್ಮಾಳ್ ನಿವಾಸಿಯಾದ ಶ್ರೀಮತಿ ಸುಮಾ ಕಾಂಚನ್ ಎಂಬುವವರು ಶ್ರೀ ಸುರೇಶ್ ಶೆಟ್ಟಿರವರ ಮಾಲೀಕತ್ವದ ಶ್ರೀ ಸೀತಾಲಕ್ಷ್ಮೀ ಇನ್ಫ್ರಾ ಡೆವಲಪರ್ಸ್ ಎಂಬ ಸಂಸ್ಥೆಯಲ್ಲಿ ಸುಮಾರು 11 ವರ್ಷ ಗಳಿಂದ ಕಛೇರಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು, ಅವರನ್ನು ಏಪ್ರೀಲ್ 2023 ರಂದು ಕೆಲಸದಿಂದ ವಜಾಗೊಳಿಸಲಾಗಿತ್ತು, ಈ ವಿಚಾರವಾಗಿ ಸುಮಾ ಕಾಂಚನ್ ರವರು ತಮ್ಮನ್ನು ಯಾವುದೇ ಸಕಾರಾತ್ಮಕ ಕಾರಣವಿಲ್ಲದೆ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆಂದು ಆಪಾದಿಸಿ ಕೈಗಾರಿಕೆಗಳ ವಿವಾದಗಳ ಕಾಯ್ದೆ 1947ರ ಅಡಿಯಲ್ಲಿ ಸೂಕ್ತ ಪರಿಹಾರ ಕೋರಿ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ. ಸದರಿ ಪ್ರಕರಣದ ವಿಚಾರವನ್ನು ಪುರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರನ್ನು ಅಕ್ರಮವಾಗಿ ವಜಾಗೊಳಿಸಿರುವುದು ಸಾಬೀತಾಗಿರುವ ಕಾರಣ ಅವರಿಗೆ ರೂ. 10,00,000/- ಗಳನ್ನು ಪರಿಹಾರವಾಗಿ ನೀಡಬೇಕೆಂದು ದಿನಾಂಕ 09-09-2024 ರಂದು ಆದೇಶ ಹೊರಡಿಸಿತ್ತು, ಆದರೂ ಎದುರುದಾರ ಮಾಲೀಕರು ಪರಿಹಾರ ನೀಡದ ಕಾರಣ ಅಮಲ್ದಾರಿ ಅರ್ಜಿ್ಯ ಮೇರೆಗೆ ಅವರ ಮಾಲೀಕತ್ವದಲ್ಲಿರುವ ಯಂತ್ರೋಪಕರಣಗಳನ್ನು ಜಪ್ತಿ ಮಾಡಲು ಘನ ನ್ಯಾಯಾಲಯವು ಆದೇಶಿಸಿದೆ. ಅರ್ಜಿದಾರರ ಪರವಾಗಿ ಬೆಂಗಳೂರಿನ ವಕೀಲರಾದ ಶ್ರೀ ಕಿರಣ್ ಎನ್ ರವರು ವಾದಿಸಿರುತ್ತಾರೆ.