ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ವಿವಿಧ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿತ ಸದಾಪ್ ಹಾಗೂ ಅವನ ಸಹಚರ ಮೊಹಮ್ಮದ್ ಮುಫೀದ್ ಕುರಿತು ದೊರೆತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಮತ್ತು ಮಲ್ಪೆ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಮಲ್ಪೆ ಠಾಣೆಯ ಉಪನಿರೀಕ್ಷಕರಾದ ಅನೀಲ್ ಕುಮಾರ್ ಡಿ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಆರೋಪಿತರ ಪತ್ತೆಗೆ ಮುಂದಾಯಿತು. ಕೆಮ್ಮಣ್ಣು ಸೇತುವೆ ಸಮೀಪದ ಮುಫೀದ್ ನಿವಾಸಕ್ಕೆ ಭೇಟಿ ನೀಡಿದಾಗ ಆರೋಪಿಗಳು ಮನೆದಲ್ಲಿಲ್ಲವೆಂದು ಕುಟುಂಬಸ್ಥರು ತಿಳಿಸಿದರು.
ಈ ವೇಳೆ ಮನೆಯ ಮುಂದೆ ನಿಂತಿದ್ದ KA15M4270 ನಂಬರಿನ ಬಿಳಿ ಬಣ್ಣದ ಮಾರುತಿ ರಿಡ್ಜ್ ಕಾರು ಪೊಲೀಸರ ಗಮನಕ್ಕೆ ಬಂದಿದೆ. MCCTNS ಆಪ್‌ನಲ್ಲಿ ಪರಿಶೀಲನೆ ನಡೆಸಿದಾಗ, ಆ ನಂಬರಿನ ಕಾರು ರಾಯಚೂರು ಜಿಲ್ಲೆಯ ನಿವಾಸಿ ಮೊಹಮ್ಮದ್ ಫಾರುಕ್ ಅವರ ಹೆಸರಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಕಾರಿನ ನಿಜ ಮಾಲೀಕರನ್ನು ಸಂಪರ್ಕಿಸಿದಾಗ, ಕಾರು ತನ್ನ ಮನೆಯಲ್ಲೇ ಇರುವುದಾಗಿ ಅವರು ತಿಳಿಸಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸರು, ಆರೋಪಿಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದರೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂಚರ ಸಮ್ಮುಖದಲ್ಲಿ ಮಾರುತಿ ರಿಡ್ಜ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪರಾರಿಯಾದ ಆರೋಪಿಗಳ ಬಂಧನಕ್ಕಾಗಿ ಶೋಧ ಮುಂದುವರಿದಿದೆ.





