Home Crime ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣ : ಕೇರಳದ ಕುಖ್ಯಾತ ಬ್ಯಾಂಕ್ ದರೋಡೆಕೋರ...

ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣ : ಕೇರಳದ ಕುಖ್ಯಾತ ಬ್ಯಾಂಕ್ ದರೋಡೆಕೋರ ಸೆರೆ…!!

ಮಂಗಳೂರು : ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿ ಮಾರ್ಚ್ 29ರಂದು ರಾತ್ರಿ ಮುತ್ತೂಟ್ ಫೈನಾನ್ಸ್ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನ ನಡೆದಿತ್ತು. ದೇರಳಕಟ್ಟೆ ಪರಿಸರದಲ್ಲಿ ಹೆಚ್.ಎಮ್ ಕಾಂಪ್ಲೆಕ್ಸ್ ನ ಮುತ್ತೂಟ್ ಫೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ಕೇಬಲನ್ನು ತುಂಡು ಮಾಡಿ ಕಳವು ಮಾಡಲು ಪ್ರಯತ್ನ ಮಾಡಿರುವುದಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಂಞಿಗಾಡ್ ನ ಆರ್ಷದ್ ಎಂಬವರನ್ನು ಆಗಲೇ ಬಂಧಿಸಲಾಗಿತ್ತು. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಹಾಗೂ ಈ ಹಿಂದೆ ನಡೆದ ರಾಜಧಾನಿ ಜುವೆಲ್ಲರಿ ಶಾಪ್ ಕಳ್ಳತನ ಹಾಗೂ ಕೇರಳ ರಾಜ್ಯದ ವಿಜಯ ಬ್ಯಾಂಕ್ ಕಳ್ಳತನದ ಮುಖ್ಯ ಸಂಚುಕೋರನಾದ ಕಾಸರಗೋಡು ಜಿಲ್ಲೆಯ ವೆಲ್ಲರಿಕುಂಡು ನಿವಾಸಿ ಅಬ್ದುಲ್ ಲತೀಫ್ (47) ಎಂಬಾತನನ್ನು ವಶಕ್ಕೆ ಪಡೆದು ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಅಬ್ದುಲ್ ಲತೀಫ್ ಎಂಬಾತನ ಮೇಲೆ ಈ ಹಿಂದೆ ಕೇರಳ ರಾಜ್ಯದ ಹೊಸದುರ್ಗ ಠಾಣೆ ವ್ಯಾಪ್ತಿಯ ರಾಜಧಾನಿ ಜುವೆಲ್ಲರಿ ಶಾಪ್ ನ ಸುಮಾರು 20 ಕೆಜಿಯಷ್ಟು ಬಂಗಾರವನ್ನು ಕಳ್ಳತನ ಮಾಡಿದ ಪ್ರಕರಣ ಮತ್ತು ಕೇರಳ ರಾಜ್ಯದ ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯ ಚೆರವತ್ತೂರು ವಿಜಯ ಬ್ಯಾಂಕ್ ನಲ್ಲಿ ಸುಮಾರು 15.80 ಕೆಜಿಯಷ್ಟು ಬಂಗಾರ ಮತ್ತು 2.5 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ ಪ್ರಕರಣ ದಾಖಲಾಗಿದೆ.

ಬಂಧನ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.