ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಸರ್ಕಾರಿ ಶಿಕ್ಷಕಿಯೊಬ್ಬರು ಮನೆಯಲ್ಲಿದ್ದ ಕೋವಿಯಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಭಾನುವಾರ ನಡೆದಿದೆ.
ಚೇರಂಬಾಣೆ ಗ್ರಾಮದ ನಿವಾಸಿ ಎ. ರೋಹಿಣಿ (51) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಇವರು ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದರು. ಇಂದು ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಮನೆಯವರೆಲ್ಲರೂ ನಿದ್ರೆಯಲ್ಲಿದ್ದಾಗ, ಕೋವಿಯಿಂದ ಶೂಟ್ ಮಾಡಿಕೊಳ್ಳುವ ಮೂಲಕ ಅವರು ತಮ್ಮ ಜೀವನ ಅಂತ್ಯಗೊಳಿಸಿದ್ದಾರೆ.
ಮೃತ ರೋಹಿಣಿ ಅವರು ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.





