Home Karavali Karnataka ಸ್ವಾತಂತ್ರ್ಯ ನಂತರದ ಭಾರತದ ಪ್ರಗತಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ : ಸೊರಕೆ…!!

ಸ್ವಾತಂತ್ರ್ಯ ನಂತರದ ಭಾರತದ ಪ್ರಗತಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ : ಸೊರಕೆ…!!

ಕಾಪು, 15/08/2025 : ಭಾರತವು ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ವಿವಿಧ ಧರ್ಮ, ಜಾತಿಯ ಅನೇಕ ಮಹಾನ್ ನಾಯಕರು, ನಾಯಕಿಯರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡಿ ಹುತಾತ್ಮರಾಗಿರುವುದು ಇತಿಹಾಸ. ದೇಶಕ್ಕಾಗಿ ಪ್ರಾಣಾರ್ಪಣೆಗೈದಿರುವ ಮಹಾನುಭಾವರನ್ನು ಇವತ್ತಿನ ದಿವಸ ಗೌರವಪೂರ್ವಕವಾಗಿ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಪಡೆದ ನಂತರ ಭಾರತವು ಅನ್ಯ ಪ್ರಗತಿಪರ ದೇಶಗಳೊಂದಿಗೆ ಪೈಪೋಟಿ ಎಂಬಂತೆ ಪ್ರಗತಿ ಪಥದಲ್ಲಿ ಸಾಗಲು ದೇಶದ ಚುಕ್ಕಾಣಿ ಹಿಡಿದ ನಾಯಕರಿಗೆ ಸವಾಲಾಗಿ ಪರಿಣಮಿಸಿತ್ತು. ಆದರೂ, ಎಲ್ಲಾ ಸಾವಾಲುಗಳನ್ನು ಪಂಥವಾಗಿ ಸ್ವೀಕರಿಸಿ ಕೃಷಿ, ಕೈಗಾರಿಕೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯನ್ನು ತಂದು, ಕಾರ್ಮಿಕ ವರ್ಗದವರಿಗೆ, ರೈತರಿಗೆ ವಿಶೇಷ ಸವಲುತ್ತುಗಳನ್ನು ನೀಡುವ ಮೂಲಕ ಬಡವರ್ಗದವರ ಏಳಿಗೆಗೆ ಅಡಿಪಾಯ ಹಾಕುವ ಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆಯನ್ನಿಟ್ಟಿತು. ಸರ್ವರಿಗೂ ಸಮಪಾಲು – ಸಮಬಾಳು ಧೋರಣೆಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಬಡ ವರ್ಗದ ಜನರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಯಿತು.

ಸಮಾಜದಲ್ಲಿ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಲ್ಪಿಸಲು ಸಾಂವಿಧಾನಿಕ ಹಕ್ಕುಗಳನ್ನು ನೀಡಲಾಯಿತು. ಜಾತ್ಯತೀತತೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆಯ ಭದ್ರ ಬುನಾದಿಯೊಂದಿಗೆ ನವ ಭಾರತ ನಿರ್ಮಾಣದ ಸಂಕಲ್ಪವನ್ನು ತೊಟ್ಟು ಪ್ರಗತಿಪರ ದೇಶವನ್ನಾಗಿಸುವ ಕಾಂಗ್ರೆಸ್ ಪಕ್ಷದ ಕನಸು ಇಂದು ಬಹುತೇಕ ಸಾಕರಗೊಂಡಿದೆ, ಭಾರತವು ಇಂದು ಆರ್ಥಿಕತೆಯಲ್ಲಿ ವಿಶ್ವದ ನಾಲ್ಕನೇ ರಾಷ್ಟ್ರವಾಗಲು ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ವಾಗಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಹೇಳಿದರು.

ಅವರು ಇಂದು ಕಾಪು ಬ್ಲಾಕ್ ಕಾಂಗ್ರೆಸ್ ಕಚೇರಿ, ರಾಜೀವ್ ಭವನ ದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರ ಧ್ವಜರೋಹಣ ಮಾಡಿ, ಶುಭಾಶಯವನ್ನು ಸಲ್ಲಿಸಿ ಮಾತನಾಡಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಇರುವ ದೇಶ ಭಾರತದಲ್ಲಿ, ವಿಭಿನ್ನ ಭಾಷೆ, ವಿಭಿನ್ನ ಸಂಸ್ಕೃತಿ, ವಿಭಿನ್ನ ಆಚಾರ – ವಿಚಾರಗಳಿರುವ ಜನರು ವಾಸಿಸುತ್ತಿದ್ದು, ಏಕತೆಯಲ್ಲಿ ಅನೇಕತೆಯನ್ನು ಪ್ರದರ್ಶಿಸುವ ಹಿರಿಮೆಯ ದೇಶವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳು ಜಾತ್ಯಾತೀತ ಭಾರತ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೈ. ಸುಕುಮಾರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಎಂ. ಎ. ಗಫೂರ್, ನವೀನ್ ಚಂದ್ರ ಸುವರ್ಣ, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಮೊಹಮ್ಮದ್ ಸಾದಿಕ್, ಮೊಹಮ್ಮದ್ ನಿಯಾಜ್, ನವೀನ್ ಎನ್. ಶೆಟ್ಟಿ, ಅಮೀರ್ ಮೊಹಮ್ಮದ್, ಗಣೇಶ್ ಕೋಟ್ಯಾನ್, ಸುನಿಲ್ ಬಂಗೇರ, ಎಚ್. ಅಬ್ದುಲ್ಲ, ದಿವಾಕರ್ ಶೆಟ್ಟಿ ಕಳತ್ತೂರ್, ರೋಹನ್ ಕುತ್ಯಾರು, ಗಣೇಶ್ ಆಚಾರ್ಯ, ರಾಜೇಶ್ ಕುಲಾಲ್, ಶಾಬು ಸಾಹೇಬ್, ಅಶ್ವಿನಿ ಬಂಗೇರ, ಜಾನ್ಸನ್ ಕರ್ಕಡ, ರವೀಂದ್ರ ಮಲ್ಲಾರ್, ಅಶೋಕ್ ನಾಯರಿ, ಹಾಗೂ ಪುರಸಭೆಯ ಸದಸ್ಯರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.